ಹಾಸನ: ಕನ್ನಡ ನಾಡು, ನುಡಿ ಗಟ್ಟಿಯಾಗಲು ಸುಗಮ ಸಂಗೀತದ ಕೊಡುಗೆ ಅನನ್ಯವಾಗಿದೆ ಎಂದು ಅಂತರಾಷ್ಟೀಯ ಸುಗಮ ಸಂಗೀತ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಟೈಮ್ಸ್ ಗುರುಕುಲ ಕಾಲೇಜಿನಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಕಲಾ ಸಂಘ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ಗೀತಯಾನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕನ್ನಡ ಗೀತೆಗಳ ತರಬೇತಿ ನೀಡಿ ಮಾತನಾಡುತ್ತ, ಕನ್ನಡ ನಾಡಿನ ಸಿರಿವಂತಿಕೆ ಬಲುದೊಡ್ಡದಾಗಿದೆ. ಇಂತಹ ನಾಡಲ್ಲಿ ಭಾಷೆ, ಗೀತೆಗಳ ಮೂಲಕ ಅನ್ಯಭಾಷಿಕರಲ್ಲಿಯೂ ಕನ್ನಡಾಭಿಮಾನ ಮೂಡಿಸುವುದು ಎಲ್ಲರ ಕರ್ತವ್ಯ. ಕನ್ನಡದ ಕಂಪು, ನಾಡು, ನುಡಿಗೆ ಭವಿಷ್ಯದ ಮಕ್ಕಳ ಕಾಣಿಕೆ ಬಲುದೊಡ್ಡದಾಗಿದೆ. ಮಕ್ಕಳು ನಾಡಿನ ಆಸ್ತಿಯಾಗಿದ್ದು, ನಾಡಗೀತೆ, ಕನ್ನಡ ಗೀತೆಗಳು ಮಕ್ಕಳ ಮನದಲ್ಲಿ ಉಳಿದರೆ ಮಾತ್ರ ಸುಂದರ ನಮ್ಮ ಭಾಷೆ ಗಟ್ಟಿಯಾಗಲಿದೆ ಎಂದರು.
ಸಂಗೀತ ಅನ್ಯಭಾಷಿಕರನ್ನು ಸೆಳೆಯುವ ಶಕ್ತಿ ಇದೆ. ಕನ್ನಡ ಭಾಷೆಯೇ ಸುಂದರ ಸಂಗೀತವಾಗಿದೆ. ಇದರ ಮಾಧುರ್ಯ ಅರಿತು ಇಡೀ ರಾಜ್ಯದಲ್ಲಿನ ಮಕ್ಕಳಲ್ಲಿ ಕನ್ನಡಾಭಿಮಾನ ಮೂಡಲು ಉಚಿತವಾಗಿ ಈ ಸುಗಮ ಸಂಗೀತದ ಅಭಿಯಾನ ಆರಂಭಿಸಲಾಗಿದೆ. ಡಿಸೆಂಬರ್ ಮಾಹೆಯಲ್ಲಿ ರಾಷ್ಟ್ರಕವಿ ಕುವೆಂಪು, ಗಾನಗಾರುಡಿಗ ಸಿ.ಎಸ್. ಅಶ್ವಥ್ ಜನ್ಮದಿನವಿದ್ದು ಅವರ ನೆನಪಿನಲ್ಲಿ ಗೀತೆಯ ಪಯಣ ಆರಂಭಿಸಲಾಗಿದೆ. ನಾಡಿನ ಶ್ರೇಷ್ಟ ಕವಿ, ಸಾಹಿತಿ, ವಚನ, ದಾಸಸಾಹಿತ್ಯದ ಪರಿಚಯವಾದಲ್ಲಿ ಬಹುಕಾಲ ಕನ್ನಡದ ಮನಸ್ಸು ವಿಶ್ವಮಟ್ಟದಲ್ಲಿ ಕನ್ನಡದ ಕಂಪು ಸೌಂದರ್ಯ ಕಂಗೊಳಿಸಲಿದೆ ಎಂದು ನುಡಿದರು.
ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಮದನಗೌಡ ಮಾತನಾಡಿ, ಕನ್ನಡ ಭಾಷೆ ಮಕ್ಕಳ ನಾಲಿಗೆಯಲ್ಲಿ ನಲಿಯಲು ಸುಗಮ ಸಂಗೀತದ ಕೊಡುಗೆ ದೊಡ್ಡದಾಗಿದೆ. ಕನ್ನಡದ ತೇರು ಸುಗುಮವಾಗಿ ಎಳೆಯಲು ಗಾಯಕ ಕಿಕ್ಕೇರಿ ಹಮ್ಮಿಕೊಂಡಿರುವ ಅಭಿಯಾನ ಕನ್ನಡದ ಅಸ್ಮಿತೆ ಉಳಿಯಲು ಸಹಕಾರಿಯಾಗಿದೆ. ಬೇಸರ ಕಳೆಯಲು ಮೊಬೈಲ್ ಬಿಡಿ, ಕನ್ನಡ ಗೀತೆಯನ್ನು ಗುನುಗಿ ಸಾಕು ಮನಸ್ಸು ಕೋಮಲವಾಗಲಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ ಗೌಡ ಮಾತನಾಡಿ, ಕಲೆ ಸಾಹಿತ್ಯ ಸಂಸ್ಕ್ರತಿಯಲ್ಲಿ ನಮ್ಮ ದೇಶ ಅತ್ಯುತ್ತ ಶ್ರೀಮಂತವಾಗಿದ್ದು ಸುಗಮ ಸಂಗೀತದಂತಹ ಕಾರ್ಯಕ್ರಮವನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಸಾಹಿತ್ಯದೊಡೆಗೆ ಮಕ್ಕಳನ್ನು ಕರೆದೊಯ್ಯುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಟೈಮ್ಸ್ ಗುರುಕುಲ ಶಾಲೆಯಲ್ಲಿ ಮಕ್ಕಳಿಗೆ ಈ ನಾಡಿನ ಶ್ರೇಷ್ಠ ಸಾಹಿತಿ ಕವಿಗಳ ಗೀತ ಗಾಯನವನ್ನು ಅತ್ಯಂತ ಸುಮಧುರವಾಗಿ ಆಡುವ ಮೂಲಕ ಮುಂಬರುವ ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸುವಂತಹ ಗೀತ ಗಾಯನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಬೇಕು ಮತ್ತು ಶಾಲೆ ಮತ್ತು ಜಿಲ್ಲೆಗೆ ಕೀರ್ತಿ ತರುವತ್ತಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಎ ಬಿ ಸುರೇಂದ್ರ ಕುಮಾರ್ ಮಾತನಾಡಿ, ನಮ್ಮ ಶಾಲೆಯು ವಿನೂತನವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕ್ರತಿಕವಾಗಿ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಜೈಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವಾ, ಎಲೆಗಳು ನೂರಾರು, ನಾವು ಭಾರತೀಯರು, ಉಳುವ ಯೋಗಿಯ ನೋಡಲ್ಲಿ, ಜೋಗದ ಸಿರಿ ಬೆಳಕಿನಲಿ, ವಿಶ್ವ ವಿನೂತನ ವಿದ್ಯಾಚೇತನ, ಕನ್ನಡವೆಂದರೆ ಬರಿ ನುಡಿಯಲ್ಲ ಇದರ ಹಿರಿದಿದೆ ಅದರರ್ಥ ಮತ್ತಿತರ ಗೀತೆಗಳನ್ನು ಮಕ್ಕಳಿಗೆ ತರಬೇತಿ ನೀಡಿ ಹಾಡಿಸಿದರು. ಮಕ್ಕಳು ಮನಸೋತು ಜುಳುಜುಳು ನಾದಲಹರಿಯೊಂದಿಗೆ ಗಾಯಕ ಕಿಕ್ಕೇರಿಯೊಂದಿಗೆ ಹಾಡಿ ಸಂಭ್ರಮದಿಂದ ನಲಿದಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶೈಲಾ ರೈ, ಸ್ಪಂದನಾ ಫೌಂಡೇಷನ್ ಟ್ರಸ್ಟಿ ಕೆ.ವಿ. ಬಲರಾಮು ಮತ್ತಿತರರಿದ್ದರು.
International smooth music singer Dr. Kikkeri Krishnamurthy said that the contribution of smooth music to the strengthening of the Kannada language and culture is unique.










