ಚಿಕ್ಕಮಗಳೂರಿನಲ್ಲಿ ನಾಳೆ ಶಾಲೆ–ಅಂಗನವಾಡಿಗಳಿಗೆ ರಜೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟು ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ನಾಳೆ (ಆ.19) ಒಂದು ದಿನದ ರಜೆ ಘೋಷಿಸಲಾಗಿದೆ.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಕಚೇರಿಯಿಂದ ಹೊರಡಿಸಲಾದ ತುರ್ತು ಜ್ಞಾಪನೆಯಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆ ಕಲಂ 26, 30 ಹಾಗೂ 34ರ ಅಡಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಜೆ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜಪುರ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಅಂಗನವಾಡಿ ಶಿಶುಪಾಲನಾ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗಲಿದೆ. ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹಾಗೂ ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯೂ ಇದರಲ್ಲಿ ಸೇರಿದೆ.

ಅಧಿಕೃತ ಸೂಚನೆಯಲ್ಲಿ, ರಜೆಯ ಅವಧಿಯಲ್ಲಿ ಕಳೆದುಹೋಗುವ ಪಾಠಗಳನ್ನು ಮುಂದಿನ ಸಾರ್ವತ್ರಿಕ ರಜಾದಿನಗಳಲ್ಲಿ ಪೂರೈಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇದೇ ವೇಳೆ, ವಿಪತ್ತು ನಿರ್ವಹಣೆಯ ಜವಾಬ್ದಾರಿಯನ್ನು ನಿರ್ಲಕ್ಷಿಸುವುದು ವಿಪತ್ತು ನಿರ್ವಹಣಾ ಕಾಯ್ದೆ ಕಲಂ 51 ರಿಂದ 60ರ ಅಡಿಯಲ್ಲಿ ದಂಡನೀಯ ಅಪರಾಧ ಎಂದು ಎಚ್ಚರಿಕೆ ನೀಡಲಾಗಿದೆ.