ಹಾಸನ: ಮಲೆನಾಡಿನಲ್ಲಿ ವರುಣನ ಆರ್ಭಟ; ಹೊಸೂರು, ಗೊದ್ದು ಗ್ರಾಮಗಳಲ್ಲಿ ಮನೆ ಗೋಡೆ, ಛಾವಣಿ ಕುಸಿತ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಸಕಲೇಶಪುರ ತಾಲೂಕಿನ ಹೊಸೂರು ಹಾಗೂ ಗೊದ್ದು ಗ್ರಾಮಗಳಲ್ಲಿ ಎರಡು ವಾಸದ ಮನೆಗಳ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದ ಘಟನೆ ನಡೆದಿದೆ. ಈ ಘಟನೆಯಿಂದ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ.

ಹೊಸೂರು ಗ್ರಾಮದ ಗಂಗಮ್ಮ ಮತ್ತು ಗೊದ್ದು ಗ್ರಾಮದ ಎಚ್.ಎನ್.ಸಣ್ಣಪ್ಪಗೌಡ ಅವರಿಗೆ ಸೇರಿದ ಮನೆಗಳು ಭಾರೀ ಮಳೆ ಮತ್ತು ಗಾಳಿಯ ರಭಸಕ್ಕೆ ಹಾನಿಗೊಳಗಾಗಿವೆ. ಎಚ್.ಎನ್.ಸಣ್ಣಪ್ಪಗೌಡ ಅವರಿಗೆ ಸಣ್ಣ ಗಾಯಗಳಾಗಿದ್ದು, ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲವಾದರೂ, ಮನೆಗಳಿಗೆ ಗಂಭೀರ ಹಾನಿಯಾಗಿದೆ.

ಸ್ಥಳೀಯರು ತಕ್ಷಣವೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ಮನೆ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಜಿಲ್ಲಾಡಳಿತದಿಂದ ತಕ್ಷಣದ ಕ್ರಮಕ್ಕೆ ಕಾಯುತ್ತಿದ್ದಾರೆ.