ಹಾಸನ : ಹಾಸನಾಂಬೆ ದೇವಿಯ ದರ್ಶನಕ್ಕೆ ಈ ಬಾರಿ ಭಕ್ತರ ಅಪಾರ ಜನಸಾಗರ ಹರಿದುಬಂದಿದ್ದು, ದಾಖಲೆಯ ಆದಾಯ ಸಂಗ್ರಹವಾಗಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ.
ಒಂದೇ ದಿನದಲ್ಲಿ ಒಂದು ಕೋಟಿಗೂ ಅಧಿಕ ಆದಾಯ ದಾಖಲಾಗಿದೆ. ಸಾವಿರ ರೂ. ಟಿಕೇಟ್ ಮಾರಾಟದಿಂದ 65 ಲಕ್ಷಕ್ಕೂ ಹೆಚ್ಚು, 300 ರೂ. ಟಿಕೇಟ್‌ಗಳಿಂದ 35 ಲಕ್ಷಕ್ಕೂ ಅಧಿಕ ಆದಾಯ ಬಂದಿದೆ. ನೆನ್ನೆಯಷ್ಟೇ 67 ಲಕ್ಷ ರೂ. ಆದಾಯ ದಾಖಲಾಗಿದ್ದು, ಆರಂಭದ ದಿನಗಳಲ್ಲಿಯೇ ಈ ಬಾರಿ ಹೊಸ ದಾಖಲೆ ನಿರ್ಮಾಣವಾಗಿದೆ.
ಕಳೆದ ವರ್ಷ ಒಟ್ಟು 12 ಕೋಟಿ ರೂಪಾಯಿ ಆದಾಯವಾಗಿದ್ದರೆ, ಈ ಬಾರಿ 15 ಕೋಟಿಗೂ ಮೀರಿದ ಆದಾಯ ಬರಲಿದೆ ಎಂಬ ನಿರೀಕ್ಷೆ ಇದೆ ಎಂದು ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಹಾಸನಾಂಬೆ ಜಾತ್ರೆ ದಿನದಿಂದ ದಿನಕ್ಕೆ ಜನಆಕರ್ಷಣೆಯ ಕೇಂದ್ರವಾಗುತ್ತಿದ್ದು, ಭಕ್ತರ ಸೌಲಭ್ಯಕ್ಕಾಗಿ ದೇವಾಲಯ ಆಡಳಿತವು ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದೆ.










