12.9 C
Munich
Home News ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬಿಟ್ಟು ಹೊರಬನ್ನಿ: ಹಾಸನದ ಸಂತ ಜೋಸೆಫ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಅನಿಲ್

ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬಿಟ್ಟು ಹೊರಬನ್ನಿ: ಹಾಸನದ ಸಂತ ಜೋಸೆಫ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಅನಿಲ್

ಹೊಳೆನರಸೀಪುರ: ಪೋಷಕರು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ‍್ಯ ನೀಡುತ್ತಿರುವುದರಿಂದ, ಅವರು ಮೊಬೈಲ್‌ಗಳಿಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಬಿಟ್ಟು, ಕೌಶಲ್ಯಾಭಿವೃದ್ಧಿ ಮತ್ತು ಕಲಿಕೆಯಲ್ಲಿ ಹೆಚ್ಚು ತೊಡಗಿಸಿ ಕೊಳ್ಳಬೇಕು ಎಂದು ತಾಲ್ಲೂಕು ಜನಪದ ಪರಿಷತ್ತು ಅಧ್ಯಕ್ಷ ಹಾಗು ಹಾಸನದ ಸಂತ ಜೋಸೆಫ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅನಿಲ್ ಬಿ.ಕೆ. ತಿಳಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟನಹಳ್ಳಿಯಲ್ಲಿ ೭೯ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, “ನೀರಿನಲ್ಲಿ ಮುಳುಗಿದವನನ್ನು ರಕ್ಷಿಸಬಹುದು, ಆದರೆ ಮೊಬೈಲ್‌ನಲ್ಲಿ ಮುಳುಗಿದವನನ್ನು ರಕ್ಷಿಸಲು ಕಷ್ಟ” ಎಂಬ ಹೋಲಿಕೆಯನ್ನು ನೀಡುತ್ತಾ, ಪೋಷಕರು ಜವಾಬ್ದಾರಿಯೊಂದಿಗೆ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೋರಾಡುವ ಅಗತ್ಯವಿದೆ ಎಂದರು.

ಮುಖ್ಯ ಶಿಕ್ಷಕ ನಾಗಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ೨೦೨೫-೨೫ನೇ ಸಾಲಿನಿಂದ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುವುದು ಎಂಬ ಖುಷಿ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಧರ್ಮರಾಜ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ರಶ್ಮಿ ಸ್ವಾಗತಿಸಿದರು. ಅತಿಥಿ ಶಿಕ್ಷಕರುಗಳಾದ ಶೀಲಾ ಮತ್ತು ಜ್ಯೋತಿಲಕ್ಷ್ಮಿ, ಕರ್ನಾಟಕ ಜಾನಪದ ಪರಿಷತ್ತು ಹೊಳೆನರಸೀಪುರ ತಾಲೂಕು ಘಟಕದ ಗೌರವ ಸಲಹೆಗಾರರಾದ ರಾಮಚಂದ್ರ, ಗ್ರಾಮದ ಹಿರಿಯ ಮುಖಂಡರಾದ ಬಸವರಾಜ್, ಚಂದ್ರು, ಸ್ನೇಹ ಬಳಗದ ಅಧ್ಯಕ್ಷ ಸಾಗರ್, ಉಪಾಧ್ಯಕ್ಷ, ಮುರಳಿ , ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮಸ್ಥರು ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡಿದರು. ವಿದ್ಯಾರ್ಥಿಗಳು ಸ್ವಾತಂತ್ರ‍್ಯ ಹೋರಾಟ ಮತ್ತು ರಾಷ್ಟ್ರೀಯ ಏಕತೆ ಕುರಿತು ನೃತ್ಯ ಕಾರ್ಯಕ್ರಮ ಪ್ರದರ್ಶಿಸಿದರು.

error: Content is protected !!