ಹೊಳೆನರಸೀಪುರ: ಇಳಿ ವಯಸ್ಸಿನ ಅಪ್ಪನ ಎರಡನೇ ಮದುವೆ: ಠಾಣೆ ಮೆಟ್ಟಿಲೇರಿದ ಪ್ರಕರಣ

Holenarasipur: A dispute has arisen due to the children's opposition to their father's second marriage at a young age, and the case has reached the police station.

ಹೊಳೆನರಸೀಪುರ: ಇಳಿ ವಯಸ್ಸಿನಲ್ಲಿ ಎರಡನೇ ವಿವಾಹವಾದ ತಂದೆಯ ನಡೆಯಿಂದ ಸಿಟ್ಟಿಗೆದ್ದ ಮಕ್ಕಳ ವಿರೋಧದಿಂದ ವಿವಾದ ಉದ್ಭವಿಸಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದಲ್ಲಿ ಕಳೆದ ಡಿಸೆಂಬರ್ 17ರಂದು ರಾಜಣ್ಣ (68) ಎಂಬವರು ಗೀತಾ (58) ಅವರೊಂದಿಗೆ ಎರಡನೇ ವಿವಾಹವಾಗಿದ್ದರು.

ರಾಜಣ್ಣ ಅವರ ಮೊದಲ ಪತ್ನಿ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ತಂದೆ ಎರಡನೇ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡ ಪುತ್ರ ಹಾಗೂ ಪುತ್ರಿಯರು, ತಂದೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಂದೆ ಹಲ್ಲೆ ನಡೆಸಿ ಆಸ್ತಿ ಬರೆದು ಕೊಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ರಾಜಣ್ಣ, ತನ್ನ ಮಕ್ಕಳೇ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಈಗಾಗಲೇ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿಗೆ ಮದುವೆ ಮಾಡಿಸಿ ಆಸ್ತಿ ಹಂಚಿಕೆ ಮಾಡಿರುವುದಾಗಿ ರಾಜಣ್ಣ ತಿಳಿಸಿದ್ದಾರೆ.

ನನ್ನ ಬಳಿ ಇರುವ ಒಂದು ಮನೆ ಕೂಡ ಮಕ್ಕಳಿಗೆ ಬೇಕೆಂದು ಒತ್ತಡ ಹಾಕಿ ಹಲ್ಲೆ ನಡೆಸಿದ್ದಾರೆ. ಜೀವನದ ಈ ಹಂತದಲ್ಲಿ ಕಷ್ಟ–ಸುಖಕ್ಕೆ ನೆರವಾಗಲೆಂದು ಎರಡನೇ ವಿವಾಹವಾಗಿದ್ದೇನೆ ಎಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಎರಡನೇ ಪತ್ನಿ ಗೀತಾ ಪತಿಯಿಂದ ದೂರವಾಗಿದ್ದು, ತನ್ನ ಮಕ್ಕಳನ್ನು ಮದುವೆ ಮಾಡಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತು ರಾಜಣ್ಣ–ಗೀತಾ ದಂಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮ ಜೀವಕ್ಕೆ ಅಪಾಯ ಇರುವುದರಿಂದ ಸೂಕ್ತ ರಕ್ಷಣೆ ನೀಡುವಂತೆ ದಂಪತಿ ಪೊಲೀಸ್ ಇಲಾಖೆ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಪ್ರಕರಣ ಇದೀಗ ಹೊಳೆನರಸೀಪುರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Holenarasipur: A dispute has arisen due to the children’s opposition to their father’s second marriage at a young age, and the case has reached the police station.