10.8 C
Munich
Home News ರೈತರ ನೆರವಿಗೆ ಸರ್ಕಾರ ಧಾವಿಸಬೇಕು: ಶಾಸಕ ಸಿಮೆಂಟ್ ಮಂಜು

ರೈತರ ನೆರವಿಗೆ ಸರ್ಕಾರ ಧಾವಿಸಬೇಕು: ಶಾಸಕ ಸಿಮೆಂಟ್ ಮಂಜು

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಿಂದಾಗಿ ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಸೇರಿದಂತೆ ಪ್ರಮುಖ ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ರೈತರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು ಸರ್ಕಾರ ತಕ್ಷಣ ನೆರವಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ಸರ್ಕಾರದ ಗಮನ ಸೆಳೆದರು.

ಅಧಿವೇಶನದಲ್ಲಿ ಬುಧವಾರ ವಿಷಯ ಪ್ರಸ್ತಾಪಿಸಿದ ಅವರು, ಭಾರಿ ಗಾಳಿ ಮಳೆಯಿಂದ ಕಾಫಿ ಹಣ್ಣುಗಳು ಕಾಯಿ ಮತ್ತು ಅಡಿಕೆ ಬೆಳೆ ಹಂತದಲ್ಲೇ ನೆಲಕ್ಕೆ ಉದುರಿವೆ. ತೋಟಗಾರಿಕೆ ಬೆಳೆಗಳೊಂದಿಗೆ ಆಲೂರು ಮತ್ತು ಕಟ್ಟಾಯ ಭಾಗದ ಮೆಕ್ಕೆಜೋಳ ಬಿಳಿ ಸುಳಿ ರೋಗಕ್ಕೆ ತುತ್ತಾಗಿವೆ. ರೈತರು ನಿರಂತರ ನಷ್ಟಕ್ಕೆ ಒಳಗಾಗುತ್ತಿದ್ದು, ಬದುಕು ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ ಎಂದು ಹೇಳಿದರು.

ರೈತರ ನೆರವಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ ಅವರು, ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್ ನಿಧಿಯಿಂದ ತುರ್ತು ಪರಿಹಾರ ಘೋಷಿಸಿ ರೈತರನ್ನು ಪಾರು ಮಾಡಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣ ಹಾನಿ ಅಂದಾಜು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಮಲೆನಾಡಿನ ಆರ್ಥಿಕ ಹಿನ್ನಡೆಯ ಕುರಿತು ಆತಂಕ ವ್ಯಕ್ತಪಡಿಸಿದ ಶಾಸಕ ಮಂಜು, ಕಾಫಿ, ಮೆಣಸು, ಅಡಿಕೆ ಮತ್ತು ಏಲಕ್ಕಿ ಬೆಳೆಗಳು ಗ್ರಾಮೀಣ ಆರ್ಥಿಕತೆಯ ಮೂಲಾಧಾರ. ಇವು ನಾಶವಾದರೆ ರೈತರಷ್ಟೇ ಅಲ್ಲ, ರಾಜ್ಯದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಸರ್ಕಾರ ತಕ್ಷಣ ದಾವಿಸದಿದ್ದರೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಮಳೆ ಮತ್ತು ರೋಗಬಾಧೆಯಿಂದ ಹಾನಿಗೊಳಗಾದ ರೈತರ ಬದುಕು ಕಟ್ಟಿಕೊಳ್ಳಲು ತುರ್ತು ಪರಿಹಾರ ಮತ್ತು ಪುನಶ್ಚೇತನ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್. ಚಲುರಾಯಸ್ವಾಮಿ, ಪ್ರಸಕ್ತ ವರ್ಷದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬೆಳೆಗಳು ನಾಶವಾಗಿ ಇಳುವರಿ ಕೂಡ ಕಡಿಮೆಯಾಗಿದೆ ಗಮನಕ್ಕೆ ಬಂದಿದೆ. ಆದ್ದರಿಂದ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ವರದಿ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಂಡ ರಚನೆ ಮಾಡಲಾಗಿದ್ದು ಆದೇಶ ಹೊರಡಿಸಲಾಗಿದೆ. ವರದಿ ಬಂದ ನಂತರ ನಷ್ಟವನ್ನು ತುಂಬಿಕೊಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ ಎಂದು ವಿಧಾನಸಭೆಗೆ ತಿಳಿಸಿದರು.

error: Content is protected !!