Hassan|ಹಾಸನ:“ನಾವು ಇಂದು ನೆಡುವ ಗಿಡಗಳು ನಾಳಿನ ಪೀಳಿಗೆಗೆ ನೀಡುವ ಅಮೂಲ್ಯ ಉಡುಗೊರೆ. ಹಸಿರು ಪರಿಸರವೇ ಆರೋಗ್ಯಕರ ಸಮಾಜದ ಅಡಿಪಾಯ” ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ (Shreyas M Patel) ಶ್ರೇಯಸ್ ಎಂ. ಪಟೇಲ್ ಅವರು ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಹಾಸನ ನಗರ ಪಾಲಿಕೆಯ ಸಹಯೋಗದಲ್ಲಿ ನಗರದ 80 ಅಡಿ ರಸ್ತೆಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಹಸಿರು ಹಾಸನ – ಸ್ವಚ್ಛ ಹಾಸನ – ಸುಂದರ ಹಾಸನ’ ಎಂಬ ಸಂಕಲ್ಪದೊಂದಿಗೆ ಪರಿಸರ ಸಂರಕ್ಷಣೆ ಮತ್ತು ಹಸಿರು ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಗಿಡಮರಗಳೇ ಪರಿಣಾಮಕಾರಿ ಪರಿಹಾರ:
ಇಂದು ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಸವಾಲುಗಳಿಗೆ ಗಿಡಮರಗಳೇ ಪರಿಣಾಮಕಾರಿ ಪರಿಹಾರವಾಗಿವೆ. ಒಂದು ಗಿಡ ಕೇವಲ ಮರವಾಗಿ ಬೆಳೆಯುವುದಲ್ಲ, ಅದು ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೆರಳು, ಜೀವ ವೈವಿಧ್ಯ ಮತ್ತು ಆರೋಗ್ಯಕರ ಪರಿಸರವನ್ನು ಕೊಡುಗೆಯಾಗಿ ನೀಡುತ್ತದೆ ಎಂದು ಸಂಸದರು ಪರಿಸರದ ಮಹತ್ವವನ್ನು ವಿವರಿಸಿದರು.
ಪೋಷಿಸುವ ಜವಾಬ್ದಾರಿಯೂ ನಮ್ಮದೇ:
“ನಮ್ಮ ಪೂರ್ವಜರು ಪ್ರಕೃತಿಯನ್ನು ಪೂಜ್ಯಭಾವದಿಂದ ಕಂಡು, ಪರಿಸರದೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿದ್ದರು. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಿಡ ನೆಡುವುದಷ್ಟೇ ಅಲ್ಲ, ಅವುಗಳನ್ನು ಸಂರಕ್ಷಿಸಿ ಪೋಷಿಸುವ ಜವಾಬ್ದಾರಿಯೂ ನಮ್ಮದಾಗಿದೆ. ಪ್ರತಿಯೊಬ್ಬ ನಾಗರಿಕರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಬೆಳವಣಿಗೆಯ ಜವಾಬ್ದಾರಿಯನ್ನು ಹೊತ್ತರೆ, ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆ ಹಸಿರು ಸಮೃದ್ಧಿಯ ಮಾದರಿಯಾಗಿ ಬೆಳೆಯಲಿದೆ” ಎಂದು ಕರೆ ನೀಡಿದರು.
ಹಾಸನ ನಗರವನ್ನು ಇನ್ನಷ್ಟು ಹಸಿರು ಮತ್ತು ಸುಂದರ ನಗರವನ್ನಾಗಿ ರೂಪಿಸುವ ಉದ್ದೇಶದಿಂದ 80 ಅಡಿ ರಸ್ತೆಯ ಉದ್ದಕ್ಕೂ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗಿದೆ. ಈ ಪರಿಸರ ಸ್ನೇಹಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ಹಾಸನ ನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಸಾರ್ವಜನಿಕರು, ಪರಿಸರ ಪ್ರೇಮಿಗಳು ಹಾಗೂ ಯುವಕರಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಇದೇ ವೇಳೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.










