ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೆ ಮೂರು ಬಲಿ: ಡಿಗ್ರೂಪ್ ನೌಕರ, ಮಹಿಳೆ, ಇಂಗ್ಲಿಷ್ ಪ್ರೊಫೆಸರ್ ಹಾರ್ಟ್ ಅಟ್ಯಾಕ್ ನಿಂದ ಸಾವು

Hassan: Three more people have died of heart attacks in separate cases in the district, taking the total number of deaths to seven in a week.

ಹಾಸನ, ಜೂನ್ 30: ಜಿಲ್ಲೆಯಲ್ಲಿನ ಪ್ರತ್ಯೇಕ ಪ್ರಕರಣಗಳಲ್ಲಿ ಹೃದಯಾಘಾತಕ್ಕೆ ಮತ್ತೆ ಮೂವರು ಬಲಿಯಾಗಿದ್ದು, ವಾರದಲ್ಲಿ ಏಳು ಜನರು ಹಾರ್ಟ್ ಅಟ್ಯಾಕ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಕರಣ1:ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿನಗರದಲ್ಲಿ ಗೃಹಿಣಿ ಲೇಪಾಕ್ಷಿ (50) ಅವರು ಹೃದಯಾಘಾತದಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ. ಲೇಪಾಕ್ಷಿ ಅವರ ಪತಿ ನಾಗರಾಜು ಹಿಟ್ಟಿನ ಗಿರಣಿ ನಡೆಸುತ್ತಿದ್ದಾರೆ.

ಮೃತ ಲೇಪಾಕ್ಷಿ

ಬೆಳಿಗ್ಗೆ ಮನೆಯಲ್ಲಿದ್ದಾಗ ಲೇಪಾಕ್ಷಿ ಅವರು ಸುಸ್ತು ಎಂದು ತಿಳಿಸಿದ್ದು, ಕೂಡಲೇ ಕುಟುಂಬಸ್ಥರು ಅವರನ್ನು ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಿ ಲೇಪಾಕ್ಷಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

ಪ್ರಕರಣ2:

 ಹೃದಯಾಘಾತಕ್ಕೆ ಡಿ ಗ್ರೂಪ್ ನೌಕರ ಸಾವು

:ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ನಾಡಕಚೇರಿಯ ಡಿ ಗ್ರೂಪ್ ನೌಕರ ಕುಮಾರ್ (57) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಕುಮಾರ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಬಸ್ಥರು ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ.

ಕುಮಾರ್ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಮಾಹಿತಿ ದೊರೆತಿದೆ.

ಪ್ರಕರಣ 3:

ಹೃದಯಾಘಾತಕ್ಕೆ ಇಂಗ್ಲಿಷ್ ಪ್ರೊಫೆಸರ್ ಬಲಿ:

ಹೊಳೆನರಸೀಪುರದಲ್ಲಿ ಇಂದು  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಮುತ್ತಯ್ಯ (58) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚನ್ನರಾಯಪಟ್ಟಣದ ನಿವಾಸಿಯಾಗಿದ್ದ ಮುತ್ತಯ್ಯ, ಇಂದು ಬೆಳಿಗ್ಗೆ ಕಾಲೇಜಿಗೆ ಬಂದ ವೇಳೆ ಹೊಳೆನರಸೀಪುರ ಬೈಪಾಸ್ ರಸ್ತೆಯಲ್ಲಿ ಟೀ ಕುಡಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ.

ಮುತ್ತಯ್ಯ

ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರಾದರೂ, ಆಗಲೇ ಮುತ್ತಯ್ಯ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಈ ಘಟನೆಗಳು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿವೆ.

ಈ ಘಟನೆಯಿಂದ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಮುತ್ತಯ್ಯ ಅವರ ಅಗಲಿಕೆಗೆ ಸಂತಾಪ ಸೂಚಿಸಿ, ಕಾಲೇಜಿನಲ್ಲಿ ಶೋಕಾಚರಣೆ ಘೋಷಿಸಲಾಗಿದೆ.