ಹಾಸನ: ಪೊಲೀಸ್–ಪತ್ರಕರ್ತರ ನಡುವಿನ ಸಮನ್ವಯ ಸಮಾಜಕ್ಕೆ ಸರಿಯಾದ ಸಂದೇಶ ನೀಡುತ್ತದೆ: ಎಸ್‌ಪಿ ಶುಭಾನ್ವಿತ

ಹಾಸನ: ಪೊಲೀಸ್ ಹಾಗೂ ಪತ್ರಕರ್ತರ ನಡುವೆ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದೆ. ಈ ಬಾಂಧವ್ಯದಲ್ಲಿ ಭಾವನಾತ್ಮಕ ಸಂಬಂಧ ಇಲ್ಲದಿದ್ದರೆ ಸಮನ್ವಯ ಕೊರತೆಯಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸುಭಾನ್ವಿತ ಹೇಳಿದರು.

ನಗರದ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಕಧಿಕಾರಿ ಹಾಗೂ ಪತ್ರಕರ್ತರ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಧ್ಯಮದ ಪಾತ್ರ ಸಮಾಜ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದು ಎಂದರು. ಸತ್ಯಕ್ಕಿಂತ ಸುಳ್ಳು ಸುದ್ದಿಗಳು ಹೆಚ್ಚು ವೈರಲ್ ಆಗುತ್ತಿರುವ ಇಂದಿನ ಸಂದರ್ಭದಲ್ಲಿ, ನಿಖರ ಮಾಹಿತಿ ನೀಡುವ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದು ಹೇಳಿದರು.

ತಾವು ಉತ್ತರ ಪ್ರದೇಶದಲ್ಲಿ 2018ರಲ್ಲಿ ಮೊದಲ ಪೋಸ್ಟಿಂಗ್ ಪಡೆದಿದ್ದು, ವಿವಾಹದ ನಂತರ ಹಾಸನಕ್ಕೆ ಎರಡನೇ ಪೋಸ್ಟಿಂಗ್ ಆಗಿ ಆಗಮಿಸಿದ್ದೇನೆ ಎಂದು ತಿಳಿಸಿದ ಎಸ್‌ಪಿ, ಜಿಲ್ಲೆಗೆ ಬಂದು ನಾಲ್ಕು ವಾರಗಳಾಗಿದ್ದು, ಎಲ್ಲ ವಲಯಗಳಿಂದಲೂ ಉತ್ತಮ ಸಹಕಾರ ಸಿಕ್ಕಿದೆ. ಇದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಮಾಧ್ಯಮದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಡ್ರಗ್ಸ್ ನಿರ್ಮೂಲನೆ ಮೊದಲ ಆದ್ಯತೆ ಜಿಲ್ಲೆಯಲ್ಲಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಡ್ರಗ್ಸ್ ಪೆಡ್ಡರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಹಿಳೆ-ಮಕ್ಕಳ ಸುರಕ್ಷತೆಗೆ ವಿಶೇಷ ಒತ್ತು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಎರಡನೇ ಆದ್ಯತೆಯಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಪೋಕೋ ಪ್ರಕರಣಗಳ ಕುರಿತು ಗಂಭೀರ ಗಮನ ಹರಿಸಲಾಗುವುದು.

ಬಾಲ್ಯ ವಿವಾಹ ತಡೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೆ ಅಕ್ಕ ಪಡೆ ಎಂಬ ವಿಶೇಷ ತಂಡವನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ-ಕಾಲೇಜುಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಬೀಟ್ ಮಾಡುವಂತೆ ನಿಯೋಜಿಸಲಾಗುತ್ತದೆ ಎಂದರು. ವಿದ್ಯಾರ್ಥಿನಿಯರಿಗೆ ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆ ಅಪಘಾತ ತಡೆಗೆ ಕ್ರಮ ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಪಿಡಬ್ಲ್ಯೂಡಿ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಸನ, ಅರಸೀಕೆರೆ ಹಾಗೂ ಸಕಲೇಶಪುರ ಪಟ್ಟಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪರಾಧ ನಿಯಂತ್ರಣದಲ್ಲಿ ಜನ-ಪೊಲೀಸ್ ಸಹಕಾರ ಅಗತ್ಯ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಜನರು ಮತ್ತು ಪೊಲೀಸ್ ಇಲಾಖೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಎಸ್‌ಪಿ, ಅಕ್ರಮ ಬಾಂಗ್ಲಾದೇಶಿ ವಲಸಿಗರ ಕುರಿತು ಮಾಹಿತಿ ಇದ್ದಲ್ಲಿ ನೇರವಾಗಿ ತಮಗೆ ತಿಳಿಸಬೇಕು ಎಂದು ಹೇಳಿದರು. ಸಾರ್ವಜನಿಕರು ಸ್ವತಃ ವೀಡಿಯೊ ಮಾಡಿ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಕೆಂಚೇಗೌಡ, ಉಪಾಧ್ಯಕ್ಷರಾದ ನಂಜುಂಡೇಗೌಡ, ಮೋಹನ್, ಕಾರ್ಯದರ್ಶಿ ಕೆ. ಜಿ ಸುರೇಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆಪಿಎಸ್ ಪ್ರಮೋದ್ ಹಾಗೂ ಇತರರು ಉಪಸ್ಥಿತರಿದ್ದರು.