ಹಾಸನ:ನಗರದ ಸ್ಕಾಲರ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಭಕ್ತಿ, ಸಂಭ್ರಮ ಮತ್ತು ಸಂಸ್ಕೃತಿಯ ಮಿಶ್ರಣದಲ್ಲಿ ಅದ್ದೂರಿಯಾಗಿ ಜರುಗಿತು.
ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಹಾಗೂ ಸ್ಕಾಲರ್ಸ್ ವರ್ಲ್ಡ್ ಶಾಲೆಗಳ ಮಾಂಟೆಸರಿ-1, 2 ಮತ್ತು 3ನೇ ತರಗತಿಯ ಪುಟ್ಟ ಮಕ್ಕಳು ಕೊಳಲು ಹಿಡಿದು, ಕಿರೀಟ ಧರಿಸಿ, ಹಾಲು-ಬೆಣ್ಣೆ ತೊಟ್ಟಿಗಳೊಂದಿಗೆ ಗೋವಿಂದನ ರೂಪದಲ್ಲಿ ಮಿಂಚಿ ಎಲ್ಲರ ಮನಸ್ಸು ಗೆದ್ದರು.

14ನೇ ವರ್ಷಗಳಿಂದ ಜನ್ಮಾಷ್ಟಮಿ ವಿಶೇಷತೆಯಾಗಿ
ಪ್ರತಿ ವರ್ಷ ಸಂಪ್ರದಾಯಿಕವಾಗಿ ಆಯೋಜಿಸಲಾಗುವ ಈ ಹಬ್ಬವು ಈ ಬಾರಿಯೂ ಅರ್ಥಪೂರ್ಣ ಆಚರಣೆಯಾಗಿ ನಡೆಯಿತು. ಪ್ರಾರ್ಥನಾ ಗೀತೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳ ಗಾಯನ ಆಧ್ಯಾತ್ಮಿಕತೆಗೆ ಶ್ರಾವಣ ಮಳೆಯಂತೆ ಹರಿದು, ಶಾಲಾ ಆವರಣವನ್ನು ದಿವ್ಯಮಯ ವಾತಾವರಣಕ್ಕೆ ತಂದು ನಿಲ್ಲಿಸಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಾವಣ್ಯ ಪಡಿಯಾರ್ ಮತ್ತು ಸುವರ್ಣ ಉದಯಶಂಕರ್ ಅವರು “ಆಧ್ಯಾತ್ಮಿಕತೆ ಮನಸ್ಸನ್ನು ಶುದ್ಧೀಕರಿಸುವ ಶಕ್ತಿ. ಭಗವದ್ಗೀತೆಯ ಬೋಧನೆಗಳನ್ನು ಅನುಸರಿಸಿದರೆ ಪ್ರೀತಿ, ಏಕತೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಸಾಧ್ಯ,” ಎಂದು ತಮ್ಮ ಪ್ರೇರಣಾದಾಯಕ ಸಂದೇಶ ನೀಡಿದರು.
ಪೋಷಕರಲ್ಲಿ ಹರ್ಷೋದ್ಗಾರ
ಮಕ್ಕಳ ನೃತ್ಯ, ಗಾಯನ ಮತ್ತು ವೇಷಭೂಷಣ ಪ್ರದರ್ಶನಗಳನ್ನು ನೋಡಿ ಪೋಷಕರು ಭಾವುಕರಾದರು. ಗೋವಿಂದನ ವಿವಿಧ ರೂಪಗಳಲ್ಲಿ ನೃತ್ಯಿಸುತ್ತಿದ್ದ ತಮ್ಮ ಮಕ್ಕಳನ್ನು ಕಂಡು ಅನೇಕರ ಕಣ್ಣೀರು ತೇವಗೊಂಡಿತು. ಶಿಕ್ಷಕರ ಮಾರ್ಗದರ್ಶನ ಮತ್ತು ಮಕ್ಕಳ ಪರಿಶ್ರಮ ಈ ಹಬ್ಬವನ್ನು ನೆನಪಿನಲ್ಲಿಡುವಂತಾದ್ದು.
ನಿರ್ವಹಣಾ ಮಂಡಳಿಯ ಅನಿಸಿಕೆ
ಶಾಲಾ ನಿರ್ವಹಣಾ ಮಂಡಳಿಯ ಅಧ್ಯಕ್ಷರು ಡಾ. ಎಚ್.ಎನ್. ಚಂದ್ರಶೇಖರ್ ಹಾಗೂ ಶ್ರೀಮತಿ ಮಮತಾ ಚಂದ್ರಶೇಖರ್ ಅವರು, “ಶಾಲಾ ಮಟ್ಟದಲ್ಲಿ ಇಂತಹ ಹಬ್ಬಗಳನ್ನು ಆಚರಿಸುವುದು ಮಕ್ಕಳಲ್ಲಿ ನೈತಿಕತೆ, ಧಾರ್ಮಿಕ ಜಾಗೃತಿ ಮತ್ತು ಸಂಸ್ಕಾರವನ್ನು ಬಿತ್ತುವ ಒಂದು ಸುವರ್ಣಾವಕಾಶ. ಸ್ಕಾಲರ್ಸ್ ಶಾಲೆ ಸದಾ ಮಕ್ಕಳ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯ ಕಡೆ ಗಮನ ಹರಿಸುತ್ತಿದೆ,” ಎಂದು ಹೇಳಿದರು.
ಅಲಂಕಾರದಿಂದ ಸಮಾರೋಪವರೆಗೂ ಪ್ರತಿಯೊಂದು ಹಂತದಲ್ಲೂ ಅದ್ಭುತವಾಗಿ ಜರುಗಿದ ಈ ಶ್ರೀಕೃಷ್ಣ ಜನ್ಮಾಷ್ಟಮಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಒಂದೇ ಸಮಯದಲ್ಲಿ ಆಧ್ಯಾತ್ಮಿಕ ಅನುಭವ ಹಾಗೂ ಅಮೂಲ್ಯ ನೆನಪುಗಳನ್ನು ಬಿಟ್ಟಿತು.










