ಹಾಸನ: ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿತವಾದ ‘ಸೈನ್ಸ್ ಎಕ್ಸ್ಪೋ–2025’ ಗಮನ ಸೆಳೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರಾಜೀವ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಕೆ. ಮಹೇಶ್ ಮಾತನಾಡಿ, “ವಿಜ್ಞಾನವು ವಸ್ತುನಿಷ್ಠ ಹಾಗೂ ಸಂಶೋಧನಾ ಮನೋಭಾವನೆ ಬೆಳೆಸುವ ವಿಷಯವಾಗಿದೆ. ವಿದ್ಯಾರ್ಥಿಗಳು ಪ್ರಶ್ನಾರ್ಥಕ ಚಿಂತನೆ, ಹೊಸತನ ಹಾಗೂ ಸೃಜನಶೀಲತೆಯನ್ನು ಜೀವನದ ಭಾಗವಾಗಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಶಾಲೆಯ ಕಾರ್ಯದರ್ಶಿ ಹೆಚ್.ಪಿ. ಕಿರಣ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಈ ದಿನಗಳಲ್ಲಿ ಎಐ (Artificial Intelligence) ತಂತ್ರಜ್ಞಾನವು ವಿದ್ಯಾಭ್ಯಾಸದ ಭಾಗವಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಚರ್ಚೆಯ ಮೂಲಕ ವೈಜ್ಞಾನಿಕ ಮನೋಭಾವನೆ ಹಾಗೂ ಸ್ಪರ್ಧಾತ್ಮಕ ಮನೋವಿಕಾಸ ಬೆಳೆಸಿಕೊಳ್ಳಬೇಕು,” ಎಂದರು.
ಈ ಸಂದರ್ಭದಲ್ಲಿ 650ಕ್ಕೂ ಅಧಿಕ ವಿಜ್ಞಾನ ಹಾಗೂ ತಂತ್ರಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ವೈ.ಡಿ. ಚೇತನ್ ಕುಮಾರ್ (ಮುಖ್ಯಶಿಕ್ಷಕರು, ನಾಗಮಂಗಲ), ವಿಸ್ಡಮ್ ಭಾರ್ಗವಿ (ಮೈಸೂರು), ಭರತ್ ಬಿ.ಎಸ್. ಹಾಗೂ ನೇತ್ರ ಭರತ್ (ಭರತ್ ಪಿ.ಯು. ಅಕಾಡೆಮಿ, ಹಾಸನ), ಎ಼ಕಿಯಾ ಮುಮ್ತಾಜ್ ಮತ್ತು ಅನನ್ಯ (ರಾಜೀವ್ ಕಾಲೇಜು, ಹಾಸನ) ಭಾಗವಹಿಸಿದ್ದರು.
ಶಾಲೆಯ ಖಜಾಂಚಿ ಸಪ್ನ ಕಿರಣ್, ಆಡಳಿತಾಧಿಕಾರಿ ಕೆ.ಎಂ. ನಾಗರಾಜು, ಪ್ರಾಂಶುಪಾಲ ಕ್ರಿಸ್ಟೀನಾ ಎಸ್., ಶಿಕ್ಷಕ-ಶಿಕ್ಷಕಿಯರು, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.










