ಹಾಸನ : ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾರ ಮನೆ ಪಕ್ಕದ ಜಾಗದ ವಿಚಾರ ಇಂದು ಮತ್ತೆ ಸದ್ದು ಮಾಡಿದೆ.. ನನಗೆ ಸೇರಿದ ಜಾಗ ಎಂದು ಕಾಂಪೌಡ್ ಒಡೆದಿದ್ದವರ ಮೇಲೆ ಇಂದು ಯಶ್ ತಾಯಿ ಪುಷ್ಪಾ ದೂರು ನೀಡಿದ್ದಾರೆ.. ಇದು ನನ್ನದೇ ಜಾಗ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲಾತಿಗಳಿವೆ ಎಂದು ಪ್ರತಿಪಾದಿಸಿರೋ ಅವರು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ ಅಬ್ಬರಿಸಿದ್ದಾರೆ.
ಯಶ್ ತಾಯಿ ಪುಷ್ಪ ಒಂದಲ್ಲಾ ಇಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಕಳೆದ ವಾರ ಕೂಡ ಅವರ ಮನೆ ಪಕ್ಕದ ಜಾಗ ಒತ್ತುವರಿ ಆರೋಪ ದೊಡ್ಡ ಸುದ್ದಿಯಾಗಿತ್ತು. ಹಾಸನದ ವಿದ್ಯಾನಗರದ ಪುಷ್ಪ ಹೊಂದಿರುವ ಮನೆಯ ಪಕ್ಕದ ಜಾಗ ನಮಗೆ ಸೇರಿದ್ದು.
ನಮ್ಮ ಪರ ಕೋರ್ಟ್ ಆದೇಶವಿದೆ ಎಂದು ದೇವರಾಜ್ ಎಂಬುವರು ಜೆಸಿಬಿ ಮೂಲಕ ಬೆಳ್ಳಂ ಬೆಳಗ್ಗೆ ಯಶ್ ತಾಯಿ ಹಾಕಿದ್ದ ಕಾಂಪೌಂಡ್ ಅನ್ನ ಧ್ವಂಸಗೊಳಿಸಿದ್ರು. ಇದಕ್ಕೆ ಅಂದು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದ ಪುಷ್ಪಾ ಇದು ನಮಗೆ ತೊಂದರೆ ಕೊಡಲು ಮಾಡಿರೋ ಕೆಲಸ ಈ ಕೃತ್ಯ ಎಸಗಿರೋರ ಮೇಲೆ ಕಾನೂನು ಹೋರಾಟ ಮಾಡೋದಾಗಿ ಹೇಳಿಕೆ ನೀಡಿದ್ರು.
ಅವರು ಹೇಳಿದ ರೀತಿಯಲ್ಲೇ ಇಂದು ಹಾಸನದ ಬಡಾವಣೆ ಪೊಲೀಸ್ ಠಾಣೆಗೆ ಬಂದ ಪುಷ್ಪಾ ಪೊಲೀಸ್ ಠಾಣೆಯಲ್ಲಿ ಅಬ್ಬರಿಸಿದ್ರು. ಅದು ನನ್ನ ಜಾಗ ಹೇಗೆ ಅವನು ಕಾಂಪೌಂಡ್ ಒಡೆದು ಹಾಕ್ತಾನೆ ಅವನು ಅತಿಕ್ರಮವಾಗಿ ಬಂದಿದ್ದಾನೆ. ಅವನನ್ನ ಯಾಕೆ ಬಂಧಿಸಿಲ್ಲ ಎಂದು ಜೋರಾಗಿ ಪ್ರಶ್ನೆಸಿದ್ರು.
ಕಾಂಪೌಂಡ್ ಧ್ವಂಸ ಮಾಡಿದ್ದ ದೇವರಾಜ್ ವಿರುದ್ಧ ಅತಿಕ್ರಮ ಪ್ರವೇಶ, ಕಳ್ಳತನ, ಕೊಲೆ ಬೆದರಿಕೆ ಪ್ರಕರಣದಾಖಲು ಮಾಡಿದ್ರು. ನಂತರ ಮಾಧ್ಯಮದಿಂದಿಗೆ ಮಾತನಾಡಿ ಈ ಜಾಗಕ್ಕೆ ಸಂಬಂಧ ಪಟ್ಟಂತೆ ಈ ಹಿಂದೆ ನನಗೆ ಯಾವುದೇ ನೋಟೀಸ್ ಬಂದಿರಲಿಲ್ಲ.
ನಾವು ಇಲ್ಲದೇ ಇದ್ದಾಗ ಬಂದು ದೇವರಾಜ್ ಎಂಬಾತ ಅತಿಕ್ರಮ ಪ್ರವೇಶ ಮಾಡಿದ್ದಾನೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ, ನಾವು ಅಲ್ಲಿ ಬೆಲೆ ಬಾಳುವ ವಸ್ತುಗಳನ್ನ ಇಟ್ಟಿದ್ದೆವು ಅವುಗಳನ್ನೆಲ್ಲಾ ನಾಶ ಮಾಡಿ ಹೋಗಿದ್ದಾರೆ. ನಮ್ಮ ಜಾಗಕ್ಕೆ ಅವರು ಅತಿಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಇದು ನಾನು ಸ್ವಂತಕ್ಕೆ ಖರೀದಿ ಮಾಡಿದ ಜಾಗ ನಮ್ಮ ಪಕ್ಕದ ಜಾಗದವರು ಫಾರಿನ್ ನಲ್ಲಿ ಇದ್ದರು.
ಅವರ ಮಕ್ಕಳ ವಿದ್ಯಾಭ್ಯಾಸ ಮಾಡಿಸೋದಕ್ಕೆ ಸೈಟ್ ಖರೀದಿಸಿದ್ದರು ಆ ಜಾಗವನ್ನ ನಾವು ಆರು ವರ್ಷದ ಹಿಂದೆ ಖರೀದಿ ಮಾಡಿದ್ದೆವು. ಈಗ ಸುಖಾ ಸುಮ್ಮನೆ ನಮಗೆ ತೊಂದರೆ ನೀಡಿದ್ದಾರೆ. ಆ ಜಾಗದ ಸಂಪೂರ್ಣ ದಾಖಲಾತಿ ನಮ್ಮ ಬಳಿ ಇದೆ. ನಗರಸಭೆಯ ಈ ಖಾತೆ ಕೂಡ ನಮ್ಮ ಹೆಸರಲ್ಲಿದೆ.
ನನಗೆ ನ್ಯಾಯಾಲಯದಿಂದ ಯಾವುದೇ ನೋಟೀಸ್ ಬಂದಿಲ್ಲ ಇದರ ಬಗ್ಗೆ ನಮ್ಮ ವಕೀಲರು ನೋಡಿಕೊಳ್ಳುತ್ತಿದ್ದಾರೆ, ನ್ಯಾಯಾಲಯದಲ್ಲಿ ಉತ್ತರಿಸುತ್ತಾರೆ, ನಮ್ಮ ಕಾಂಪೌಂಡ್ ಒಡೆದು ನಮಗೆ ತೊಂದರೆ ಕೊಟ್ಟವರ ವಿರುದ್ಧ ದೂರು ನೀಡಿದ್ದೇನೆ ಎಂದರು.
ಒಟ್ಟಾರೆ ಈ ಆಸ್ತಿಯ ಜಟಾಪಟಿ ಮುಂದುವರೆದಿದ್ದು ಇಬ್ಬರೂ ನಮ್ಮ ಬಳಿ ದಾಖಲೆಗಳಿವೆ ಎನ್ನುತ್ತಿದ್ದು ನ್ಯಾಯಾಲಯದ ತೀರ್ಪಿನ ನಂತರವಷ್ಟೇ ಜಾಗ ಯಾರದ್ದು ಎಂಬ ಅಂಶ ಹೊರಬರಲಿದೆ.










