ಹಾಸನ: ವೆನುಜುವೆಲಾ ಮೇಲೆ ಅಮೆರಿಕಾದ ದಾಳಿ ಖಂಡಿಸಿ ಸಿಪಿಐಎಂ ಪ್ರತಿಭಟನೆ

ಹಾಸನ: ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕಾದ ದಾಳಿ ಅಂತರರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾಗಿದ್ದು, ಅತ್ಯಂತ ದುರಾಕ್ರಮಣಕಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಹಾಸನ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಹಾಸನ ಜಿಲ್ಲಾ ಸಮಿತಿಯ ವತಿಯಿಂದ ನಗರದ ಮಹಾವೀರ ವೃತ್ತದಲ್ಲಿ “ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕಾದ ದಾಳಿ ಖಂಡಿಸಿ, ವೆನುಜುವೆಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಹಾಗೂ ಅವರ ಪತ್ನಿ ಬಿಡುಗಡೆಗೆ ಆಗ್ರಹಿಸಿ, ಅಮೆರಿಕಾದ ಸುಂಕ ನೀತಿಗೆ ವಿರೋಧವಾಗಿ” ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಮೆರಿಕಾ ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಮಾಡುತ್ತಲೇ ತಾನು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿದ್ದು, ವಾಸ್ತವದಲ್ಲಿ ಅತ್ಯಂತ ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ವರ್ತಿಸುತ್ತಿದೆ ಎಂದು ನವೀನ್ ಕುಮಾರ್ ಆರೋಪಿಸಿದರು. ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರವಾದ ವೆನುಜುವೆಲಾದ ಮೇಲೆ ಏಕಾಏಕಿ ದಾಳಿ ನಡೆಸಿ ಬಾಂಬ್‌ ಸುರಿಸಿ ನೂರಾರು ಜನರನ್ನು ಹತ್ಯೆ ಮಾಡಿರುವುದು ಮತ್ತು ಅಲ್ಲಿನ ಅಧ್ಯಕ್ಷರನ್ನು ಅಪಹರಿಸಿರುವುದು ಖಂಡನೀಯ ಎಂದು ಅವರು ಹೇಳಿದರು.

ವೆನುಜುವೆಲಾದ ತೈಲ ಹಾಗೂ ಖನಿಜ ಸಂಪತ್ತನ್ನು ತನ್ನ ವಶಕ್ಕೆ ಪಡೆದು ಅಮೆರಿಕಾದ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಈ ದಾಳಿಯ ಹಿಂದಿನ ಉದ್ದೇಶವಾಗಿದ್ದು, ಇದು ಜಾಗತಿಕ ಶಾಂತಿಗೆ ಭಾರೀ ಅಪಾಯಕಾರಿಯಾಗಿದೆ ಎಂದು ಅವರು ಎಚ್ಚರಿಸಿದರು. ಅಮೆರಿಕಾದ ಬಂಡವಾಳಶಾಹಿ ವ್ಯವಸ್ಥೆ ಗಂಭೀರ ಬಿಕ್ಕಟ್ಟಿಗೆ ಸಿಲುಕಿದ್ದು, ಅದರಿಂದ ಹೊರಬರಲು ಟ್ರಂಪ್ ನೇತೃತ್ವದಲ್ಲಿ ಇಂತಹ ಆಕ್ರಮಣಕಾರಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.

ಲ್ಯಾಟಿನ್ ಅಮೆರಿಕಾದ ವೆನುಜುವೆಲಾ, ಕ್ಯೂಬಾ ಮೊದಲಾದ ರಾಷ್ಟ್ರಗಳು ತಮ್ಮ ದೇಶದ ಸಂಪತ್ತನ್ನು ಜನರ ಹಿತಕ್ಕಾಗಿ ಬಳಸುವ ಸಮಾಜವಾದಿ ನಿಲುವು ಹೊಂದಿರುವುದೇ ಅಮೆರಿಕಾಕ್ಕೆ ಅಸಹ್ಯವಾಗಿದ್ದು, ಆ ರಾಷ್ಟ್ರಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಆರ್ಥಿಕ ದಿಗ್ಬಂಧನ ವಿಧಿಸುವ ಮೂಲಕ ಅವುಗಳನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ನವೀನ್ ಕುಮಾರ್ ಹೇಳಿದರು. ಕೂಡಲೇ ವೆನುಜುವೆಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಹಾಗೂ ಅವರ ಪತ್ನಿಯನ್ನು ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಅಮೆರಿಕಾ ಜಾಗತಿಕ ಮಟ್ಟದಲ್ಲಿ ಸುಂಕ ಸಮರಕ್ಕೆ ಇಳಿದಿದ್ದು, ಇದರ ಪರಿಣಾಮವಾಗಿ ಭಾರತ ಸೇರಿದಂತೆ ಅನೇಕ ದೇಶಗಳ ಕೃಷಿ ಹಾಗೂ ಉತ್ಪಾದನಾ ಕ್ಷೇತ್ರಗಳಿಗೆ ತೀವ್ರ ಹೊಡೆತ ಬೀಳಲಿದೆ. ಭಾರತದ ಉತ್ಪನ್ನಗಳ ಮೇಲೆ ಅಮೆರಿಕಾ ಶೇ.500ರಷ್ಟು ಆಮದು ಸುಂಕ ವಿಧಿಸಿದರೆ, ಭಾರತೀಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವಕಾಶವೇ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಅಮೆರಿಕಾದ ಇಂತಹ ನೀತಿಗಳನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕೆಂದು ಅವರು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಕೆಂಬಾವುಟಗಳು ಹಾಗೂ ಘೋಷಣಾಪಟಗಳನ್ನು ಹಿಡಿದ ಪಕ್ಷದ ಕಾರ್ಯಕರ್ತರು ಅಮೆರಿಕಾದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಸಿಪಿಐಎಂ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಜಿಲ್ಲಾ ಸಮಿತಿ ಸದಸ್ಯರಾದ ಜಿ.ಪಿ. ಸತ್ಯನಾರಾಯಣ, ಅರವಿಂದ್, ಜನಪರ ಸಂಘಟನೆಗಳ ಮುಖಂಡರಾದ ರಾಜಶೇಖರ್ ಹುಲಿಕಲ್, ರಾಜು ಗೊರೂರು, ಟಿ.ಆರ್. ವಿಜಯ್ ಕುಮಾರ್, ಪ್ರಕಾಶ್, ಮುಬಷಿರ್ ಅಹಮದ್, ಇರ್ಷಾದ್ ಅಹಮದ್ ದೇಸಾಯಿ, ಸಿ. ಸೌಭಾಗ್ಯ, ಮಮತಾಶಿವು, ಚಿನ್ನೇನಹಳ್ಳಿ ಸ್ವಾಮಿ, ಅನ್ಸರ್, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.