ಹಾಸನ : ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಅಜಾಗರೂಕತೆ ಮತ್ತೆ ತೀವ್ರವಾಗಿದೆ. “ನೀವು ಹೇಳೋದ್ ಹೇಳ್ತಾನೆ ಇರಿ, ನಾವು ಮಾಡೋದ್ ಮಾಡ್ತಾನೆ ಇರ್ತೀವಿ” ಎಂಬ ಧೋರಣೆಯಲ್ಲಿ ಕೆಲ ಪ್ರವಾಸಿಗರು ಎತ್ತರದ ಬಂಡೆಗಳ ಮೇಲೆ ಹತ್ತಿ ಅಪಾಯಕಾರಿ ರೀತಿಯಲ್ಲಿ ಫೋಟೋ ಶೂಟ್ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಿರಂತರವಾಗಿ ನೀರು ಹರಿಯುವ ಕಾರಣ ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಇರುವ ಬಂಡೆಗಳು ತೀವ್ರವಾಗಿ ಜಾರುವ ಸ್ಥಿತಿಯಲ್ಲಿವೆ. ಸ್ವಲ್ಪ ಯಾಮಾರಿದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದ್ದರೂ, ಪ್ರವಾಸಿಗರು ಎಚ್ಚರಿಕೆಗೂ ಕಿವಿಗೊಡದೆ ಬಂಡೆಗಳ ಮಧ್ಯೆ ಹೋಗಿ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.
ಈ ಹಿಂದೆ ಇದೇ ಸ್ಥಳದಲ್ಲಿ ಬಿದ್ದು ಕೈ–ಕಾಲು ಮುರಿದುಕೊಂಡ ಘಟನೆಗಳು ನಡೆದಿದ್ದು, ಕೆಲವರು ಜೀವವೂ ಕಳೆದುಕೊಂಡಿರುವ ಉದಾಹರಣೆಗಳಿವೆ. ಇದಾದರೂ ಪಾಠ ಕಲಿಯದ ಪ್ರವಾಸಿಗರು ಪೊಲೀಸರ ಗಸ್ತು ಇದ್ದರೂ ಅವರ ಕಣ್ತಪ್ಪಿಸಿ ಮೋಜು–ಮಸ್ತಿಯಲ್ಲಿ ತೊಡಗುತ್ತಿದ್ದಾರೆ.
ಅಪಾಯದ ಸ್ಥಳಗಳಲ್ಲಿ “ಬಂಡೆಗಳ ಮೇಲೆ ಹತ್ತಬೇಡಿ” ಎಂಬ ನಾಮಫಲಕಗಳನ್ನು ಅಳವಡಿಸಿದರೂ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಸ್ಥಳೀಯರು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದವರು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚಾರ್ಮಾಡಿ ಘಾಟಿ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ನಿಗಾ, ದಂಡಾತ್ಮಕ ಕ್ರಮ ಹಾಗೂ ನಿಯಂತ್ರಣ ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.










