ಹಾಸನ: ಜ. 20 ರಂದು 28ನೇ ವರ್ಷದ ಭೀಮ ಕೋರೆಂಗಾವ್ ವಿಜಯೋತ್ಸವ

ಹಾಸನ: ಭೀಮ ಕೋರೆಂಗಾವ್ ವಿಜಯೋತ್ಸವ ಆಚರಣಾ ಸಮಿತಿ, ಹಾಸನ ಇವರ ಆಶ್ರಯದಲ್ಲಿ 28ನೇ ವರ್ಷದ ಭೀಮ ಕೋರೆಂಗಾವ್ ವಿಜಯೋತ್ಸವವನ್ನು ಜ.೨೦ ರ ಬೆಳಗ್ಗೆ 10 ಗಂಟೆಗೆ ಪ್ರಜಾ ಸೌಧ ಸಮೀಪ, ಬಿ.ಎಂ. ರಸ್ತೆ, ಹಾಸನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಸಂದೇಶ್ ಅವರು ತಿಳಿಸಿದರು.

ಭಾರತದ ಇತಿಹಾಸದಲ್ಲಿನ ಮಹತ್ವದ ಘಟನೆಯಾದ 1818ರ ಭೀಮ ಕೋರೆಂಗಾವ್ ಯುದ್ಧದಲ್ಲಿ ದಲಿತ ಸೈನಿಕರು ತೋರಿದ ಶೌರ್ಯ, ಧೈರ್ಯ ಮತ್ತು ಅನ್ಯಾಯದ ವಿರುದ್ಧದ ಹೋರಾಟವನ್ನು ಸ್ಮರಿಸುವ ಉದ್ದೇಶದಿಂದ ಈ ವಿಜಯೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.ಈ ಯುದ್ಧವು ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ಸ್ಥಳಕ್ಕೆ ವಿಶೇಷ ಐತಿಹಾಸಿಕ ಮಹತ್ವವನ್ನು ನೀಡಿದ್ದರು ಎಂದರು.

ಈ ವರ್ಷದ ಕಾರ್ಯಕ್ರಮದ ಅಂಗವಾಗಿ ಡಿ.ಜೆ. ಸೌಂಡ್ಸ್ ಡೊಳ್ಳುಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ರೈಲ್ವೆ ನಿಲ್ದಾಣದಿಂದ ಎನ್.ಆರ್. ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಅಂಬೇಡ್ಕರ್ ಭಾವಚಿತ್ರಗಳು, ನೀಲಿ ಧ್ವಜಗಳು, ಸಮಾನತೆ ಹಾಗೂ ಬೌದ್ಧ ಧಮ್ಮದ ಸಂದೇಶಗಳನ್ನು ಸಾರುವ ಘೋಷಣೆಗಳೊಂದಿಗೆ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭೀಮರಾವ್ ಅಂಬೇಡ್ಕರ್ (ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ), ಎಸ್. ಸಿದ್ದರಾಜು (ನಿವೃತ್ತ ಡಿ.ಸಿ.ಪಿ.), ಹೆಚ್.ಕೆ. ಸಂದೇಶ್ (ಅಧ್ಯಕ್ಷರು, ಭಾರತೀಯ ಬೌದ್ಧ ಮಹಾಸಭೆ) ಹಾಗೂ ಸಿದ್ಧನಾಕ (ರಾಷ್ಟ್ರೀಯ ಕಾರ್ಯಾಧ್ಯಕ್ಷರು, ಭಾರತೀಯ ಬೌದ್ಧ ಮಹಾಸಭೆ) ಭಾಗವಹಿಸಿ ಸಮಾನತೆ, ಬೌದ್ಧ ಧರ್ಮ, ಸಂವಿಧಾನ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಕುರಿತು ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮ ಕೋರೆಂಗಾವ್ ವಿಜಯೋತ್ಸವ ಆಚರಣಾ ಸಮಿತಿ, ಹಾಸನದ ಅಧ್ಯಕ್ಷರು ವಹಿಸಲಿದ್ದು, ವಿವಿಧ ಸಂಘಟನೆಗಳ ಮುಖಂಡರು, ಬುದ್ಧಿಜೀವಿಗಳು ಹಾಗೂ ಯುವಕರು ಉಪಸ್ಥಿತರಿರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಬೌದ್ಧ ಗೀತಗಳು ಹಾಗೂ ಶೌರ್ಯಗಾಥೆಗಳ ವಾಚನದಿಂದ ವೇದಿಕೆ ಕಾರ್ಯಕ್ರಮ ಸಮೃದ್ಧವಾಗಲಿದೆ ಎಂದರು.