ಹಾಸನ: 36 ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ ,ಗುತ್ತಿಗೆ ಪದ್ಧತಿ ವಿರುದ್ಧ ಹೋರಾಟ: ಸಿಪಿಐಎಂ ಸಮ್ಮೇಳನದಲ್ಲಿ ನಿರ್ಣಯ

ಹಾಸನ: ನಗರದಲ್ಲಿ ನಡೆಯುತ್ತಿರುವ 16ನೇ ಸಿಐಟಿಯು ರಾಜ್ಯ ಸಮ್ಮೇಳನ, ರಾಜ್ಯದ ಲಕ್ಷಾಂತರ ಕಾರ್ಮಿಕರ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಬಲ್ಲ 2 ನಿರ್ಣಾಯಕ ನಿರ್ಣಯಗಳನ್ನು ಅಂಗೀಕರಿಸಿದೆ. ಮಾಸಿಕ ಕನಿಷ್ಠ ವೇತನವನ್ನು 36,000ಕ್ಕೆ ಪರಿಷ್ಕರಿಸಬೇಕು ಮತ್ತು ಗುತ್ತಿಗೆ–ಹೊರಗುತ್ತಿಗೆ ಪದ್ಧತಿಯಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷ ವರಲಕ್ಷ್ಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾದರೆ, ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು.

ಕರ್ನಾಟಕದ ಸುಮಾರು 1.5 ಕೋಟಿ ಕಾರ್ಮಿಕರು ಎದುರಿಸುತ್ತಿರುವ ದೀರ್ಘಕಾಲೀನ ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ಅಭದ್ರತೆಯನ್ನು ಪರಿಹರಿಸುವ ಗುರಿ ನಮ್ಮದು ಎಂದು ಅವರು ಹೇಳಿದರು.

ಮೊದಲಿಗೆ ಕನಿಷ್ಠ ವೇತನ ಪರಿಷ್ಕರಣೆ ಆಗಲೇಬೇಕು. ಕಳೆದ 7 ವರ್ಷಗಳಿಂದ ವೇತನ ಪರಿಷ್ಕರಣೆ ಆಗದೆ 1.5 ಕೋಟಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ಗುತ್ತಿಗೆ ಕಾರ್ಮಿಕರ ಕಾಯಂ: ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ 50-60% ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಗೊಳಿಸಿ, ವಿಶೇಷ ಕಾನೂನಿನ ಮೂಲಕ ಕಾಯಂಗೊಳಿಸಬೇಕು.

ಸರ್ಕಾರ ತನ್ನ ಕರಡು ಅಧಿಸೂಚನೆಯಲ್ಲಿ 23,000–30,000ರ ವರೆಗೆ ವೇತನವನ್ನು ಪ್ರಸ್ತಾಪಿಸಿತ್ತು. ಆದರೆ ಸಿಐಟಿಯು ಇದನ್ನು ತಿರಸ್ಕರಿಸಿದ್ದು, 36,000 ರೂ.ವೇತನ ನ್ಯಾಯಸಮ್ಮತ ಎಂದು ಬೇಡಿಕೆ ಮುಂದಿಟ್ಟಿದೆ.

ಪ್ಲಾಂಟೇಶನ್ ಕಾರ್ಮಿಕರಿಗೆ ದಿನಕ್ಕೆ ಕೇವಲ 461 ರೂ., ಬೀಡಿ ಕಾರ್ಮಿಕರಿಗೆ 350 ರೂ. ಕೂಲಿ ದಾಟಿಲ್ಲ. ಇದು ಹೆಚ್ಚಳವಾಗಲೇಬೇಕೆಂದು ಹೇಳಿದರು.

ಖಾಸಗಿ ಉತ್ಪಾದನಾ ವಲಯದಲ್ಲಿ 50% ಮತ್ತು ಸರ್ಕಾರಿ ಸೇವೆಗಳಲ್ಲಿ 60% ಕಾರ್ಮಿಕರು ಅಸುರಕ್ಷಿತ ಉದ್ಯೋಗದಲ್ಲಿದ್ದಾರೆ. ಪ್ರತಿ ವರ್ಷ ಗುತ್ತಿಗೆ ನವೀಕರಣದ ಭಯ, ಶಾಸನಾತ್ಮಕ ಸೌಲಭ್ಯಗಳ ಕೊರತೆ, ಹಕ್ಕುಗಳ ದಮನ — ಇವೆಲ್ಲವನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ. ಸಹಕಾರಿ ಸಂಘಗಳ ಸ್ಥಾಪನೆ ಕಾಯಂ ಉದ್ಯೋಗಕ್ಕೆ ಪರ್ಯಾಯವಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್, ಸಮ್ಮೇಳನ ನಿರ್ಣಯ ಸಮಿತಿ ಸಂಚಾಲಕಿ ಯಮುನಾ ಗಾಂವ್ಕರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಪುಷ್ಪ ಹಾಜರಿದ್ದರು.

ನಾಳೆ ಬೃಹತ್ ರ‍್ಯಾಲಿ

ಸಮ್ಮೇಳನದ ಅಂತಿಮ ದಿನವಾದ ನಾಳೆ ಮಧ್ಯಾಹ್ನ 12 ಗಂಟೆಗೆ ಹೇಮಾವತಿ ಪ್ರತಿಮೆಯಿಂದ ಬೃಹತ್ ಕಾರ್ಮಿಕರ ರ‍್ಯಾಲಿ ಆರಂಭವಾಗಲಿದೆ. ಕೆಂಪು ಸಮವಸ್ತ್ರ ಧರಿಸಿದ ಕಾರ್ಮಿಕರು ಮತ್ತು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಶಿಸ್ತುಬದ್ಧವಾಗಿ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಬಹಿರಂಗ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.