ಹಾಸನ: ರಾಜ್ಯದ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸೋಮವಾರ ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಅಶೋಕ್ ಅವರು ಸರ್ಕಾರದ ನಡೆಗೆ ಕಿಡಿ ಕಾರಿದರು. “ಸಿದ್ದರಾಮಯ್ಯ ಅವರ ಸರ್ಕಾರ ಎಡಬಿಡಂಗಿ ಸರ್ಕಾರ, ತುಘಲಕ್ ಆಡಳಿತ ನಡೆಸುತ್ತಿದೆ,” ಎಂದು ಆರೋಪಿಸಿದ ಅವರು, “ಸಮೀಕ್ಷೆ ಮಾಡಲು ಸರ್ಕಾರಕ್ಕೆ ಅಧಿಕಾರವೇ ಇಲ್ಲ, ಅದು ಕೇಂದ್ರ ಸರ್ಕಾರದ ಅಧಿಕಾರವಾಗಿದೆ,” ಎಂದರು.
“ದಸರಾ ಮುಗಿದಿದೆ, ಹಬ್ಬಗಳು ನಡೆದಿವೆ, ಆದರೆ ಶಾಲೆಗಳು ಆರಂಭವಾಗಿಲ್ಲ. ಮೂರು ತಿಂಗಳು ಕಳೆದರೂ ಸಮೀಕ್ಷೆ ಮುಗಿದಿಲ್ಲ. ಸಿದ್ದರಾಮಯ್ಯ ಮಕ್ಕಳಂತೆ ಹಠ ಹಿಡಿದು ಹದಿನೈದು ದಿನದಲ್ಲಿ ಮುಗಿಸುತ್ತೇನೆ ಅಂತಾರೆ. ಇದು ಆಡಳಿತವಲ್ಲ, ತುಘಲಕ್ ಆಡಳಿತ.” ಎಂದು ಕಿಡಿಕಾರಿದರು.
ಅಶೋಕ್ ಅವರು ಸರ್ಕಾರದ ಸಮೀಕ್ಷಾ ಕಾರ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
“ಸಮೀಕ್ಷೆ ಮಾಡುವವರಿಗೆ ತರಬೇತಿ ಕೊಟ್ಟಿದೀರಾ? ಪ್ರತಿನಿತ್ಯ ಸಮೀಕ್ಷೆಗಾರರು ನಾಯಿಕಚ್ಚಿದ್ರು, ಆತ್ಮಹತ್ಯೆ ಮಾಡಿಕೊಂಡ್ರು, ಅಪಘಾತಕ್ಕೊಳಗಾದ್ರು ಎಂಬ ಸುದ್ದಿಗಳು ಬರುತ್ತಿವೆ. ನಿಗದಿತ ಅವಧಿಯಲ್ಲಿ ಮುಗಿಸದಿದ್ದರೆ ಸಂಬಳ ಕಡಿತ ಮಾಡ್ತೀನಿ ಎಂದು ಸರ್ಕಾರ ಧಮ್ಕಿ ಹಾಕುತ್ತಿದೆ. ಇದು ಏನಾದರೂ ರೌಡಿಸಮ್ಮಾ?” ಎಂದು ಪ್ರಶ್ನಿಸಿದರು.
ಅವರು ತಾವು ಮತ್ತು ತಮ್ಮ ಪತ್ನಿ ಸಮೀಕ್ಷೆಗೆ ಸೀಮಿತ ಮಾಹಿತಿ ನೀಡಿದ ವಿಚಾರವನ್ನು ಹಂಚಿಕೊಂಡು, “ನಾನು ನನ್ನ ಧರ್ಮ, ಜಾತಿ, ಹೆಸರು ಇಷ್ಟೇ ನೀಡಿದ್ದೇನೆ. ಅದಕ್ಕಿಂತ ಹೆಚ್ಚಾದರೆ ಸಹಿ ಹಾಕಲ್ಲ ಎಂದಿದ್ದೇನೆ,” ಎಂದರು.
ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರುವ ಸುಧಾಮೂರ್ತಿ ಅವರ ವಿಷಯದಲ್ಲಿನ ಕಾಂಗ್ರೆಸ್ ಪ್ರತಿಕ್ರಿಯೆ ಬಗ್ಗೆಯೂ ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಸುಧಾಮೂರ್ತಿ ಮಾಹಿತಿ ನೀಡಿಲ್ಲ ಎಂದು ಅವರಿಗೆ ಧಮ್ಕಿ ಹಾಕುತ್ತಿದ್ದಾರೆ. ಅವರು ಲಕ್ಷಾಂತರ ತೆರಿಗೆ ಕಟ್ಟುವ ಧರ್ಮಾತ್ಮರು. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸಹಾಯ ಮಾಡಿದವರು. ಅಂತವರ ಬಗ್ಗೆ ‘ಬೃಹಸ್ಪತಿ’ ಅಂತಾ ಹೇಳ್ತಾರೆ. ನೀವು ದೇವಲೋಕದಿಂದ ಬಂದವರಾ?” ಎಂದು ಪ್ರಶ್ನಿಸಿದರು.
ಹೈಕೋರ್ಟ್‌ನ ನಿರ್ದೇಶನದ ವಿಚಾರ ಉಲ್ಲೇಖಿಸಿಸ ಅವರು,“ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಸರ್ಕಾರ ಅದನ್ನು ನಿರ್ಲಕ್ಷಿಸಿದೆ. ಇದು ನ್ಯಾಯಾಂಗಕ್ಕೆ ಅಗೌರವ,” ಎಂದರು.
“ಈ ಹಿಂದೆ ಸಮೀಕ್ಷೆಗೆ 165 ಕೋಟಿ ರೂ. ಖರ್ಚುಮಾಡಿ ಫಲವನ್ನು ಶೂನ್ಯಗೊಳಿಸಿದ್ದೀರಿ. ಈಗ ಮತ್ತೆ 400 ಕೋಟಿ ರೂ. ಖರ್ಚು ಮಾಡ್ತಿದ್ದೀರಾ — ಇದು ಯಾರ ಹಣ? ಜನರ ಹಣವನ್ನು ತೇಗುತ್ತಿದ್ದೀರಿ,” ಎಂದು ಆರೋಪಿಸಿದರು.
“ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ, ಕಚ್ಚಾಟ, ಭಿನ್ನಮತ ಇದೆ. ಒಬ್ಬ ಮಂತ್ರಿಗೆ ಹೇಳಿಕೆ ಕೊಡಿಸಿ ಮನೆಗೆ ಕಳಿಸಿದ್ದಾರೆ. ಇದು ದಾರಿ ತಪ್ಪಿದ ಸರ್ಕಾರ,” ಎಂದು ವಾಗ್ದಾಳಿ ನಡೆಸಿದರು.
“ಇದು ನ್ಯಾಯಾಂಗವನ್ನು ಅವಹೇಳನ ಮಾಡುವ, ಸಂವಿಧಾನಕ್ಕೆ ಅವಮಾನ ಮಾಡುವ ಸರ್ಕಾರ,” ಎಂದು ಖಂಡಿಸಿದರು.
– ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್, ಹಾಸನ








