- Hassan|ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೇ 10ರಂದು ಮದುವೆಯಾಗಬೇಕಿದ್ದ ಬೇಲೂರು ಮೂಲದ ವರ ಮನು.ಎಲ್.ಎನ್ (29) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
Hassan|ಹಾಸನ: ಮದುವೆ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಪ್ರೀ-ವೆಡ್ಡಿಂಗ್ ಶೂಟ್ಗಾಗಿ (Pre-wedding shoot) ವಧುವನ್ನು ಕರೆತರಲು ಕಾರಿನಲ್ಲಿ ಹೋಗುತ್ತಿದ್ದ ವರನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ (Road Accident) ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ, ದರ್ಬಾರ್ ಪೇಟೆ ನಿವಾಸಿ ಮನು.ಎಲ್.ಎನ್. (29) ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.

ಘಟನೆಯ ವಿವರ:
ಮುಂಬರುವ ಮೇ 10, 2026 ರಂದು ಮನು.ಎಲ್.ಎನ್. ಅವರ ವಿವಾಹ ನಿಶ್ಚಯವಾಗಿತ್ತು. ಮದುವೆಗೆ ಎರಡು ಕಡೆಯ ಮನೆಗಳಲ್ಲಿ ಭರದಿಂದ ಸಿದ್ದತೆಗಳು ನಡೆಯುತ್ತಿದ್ದವು. ಇಂದು ಪ್ರೀ-ವೆಡ್ಡಿಂಗ್ ಶೂಟ್ ಆಯೋಜಿಸಲಾಗಿದ್ದು, ಇದಕ್ಕಾಗಿ ವಧುವನ್ನು ಕರೆ ತರಲು ಮನು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಮೂಗಲಿ ಗ್ರಾಮದ ಬಳಿ ಸಾಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲೇ ಅಂತ್ಯವಾದ ಬದುಕು:
ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ಮನು.ಎಲ್.ಎನ್. ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಮಗನನ್ನು ಕಳೆದುಕೊಂಡ ಪೋಷಕರ ರೋದನ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.
ಪೊಲೀಸರ ಭೇಟಿ ಮತ್ತು ಪರಿಶೀಲನೆ:
ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










