ಹಾಸನ : ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಗರ್ಜೆ ಗ್ರಾಮದ ಬಸ್ ನಿಲ್ದಾಣ ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಒಬ್ಬ ಯುವಕನನ್ನು ಬಂಧಿಸಿರುವ ಪೊಲೀಸರು ಗಾಂಜಾ ಹಾಗೂ 1500 ರೂ. ವಶಕ್ಕೆ ಪಡೆದಿದ್ದಾರೆ.
ಶಿವಂಸಿಂಗ್ (22) ಬಂಧಿತ ವ್ಯಕ್ತಿ, ಈತ ಮೂಲ ನಿವಾಸಿ ಬಿಹಾರದ ಮೋತಿಹಾರಿ ಜಿಲ್ಲೆಯವನಾಗಿದ್ದಾನೆ. ಪ್ರಸ್ತುತ ಬೇಲೂರು ಪಟ್ಟಣದಲ್ಲಿ ವಾಸವಾಗಿದ್ದಾನೆ.
ಜ. 28 ರಂದು ಸಂಜೆ ಸುಮಾರು 5 ಗಂಟೆಗೆ ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿಗಳಾದ ಸಂಶುದ್ದೀನ್ ಸೊನ್ನದ್, ರವಿಚಂದ್ರ, ಮಂಜುನಾಥ ಹಾಗೂ ದರ್ಶನ್ ಅವರು ಆರೋಪಿಯನ್ನು ತಡೆದು ವಿಚಾರಣೆಗೊಳಪಡಿಸಿದರು.
ಆತನ ಬಳಿಯಿದ್ದ ಕಪ್ಪು ಬಣ್ಣದ ಕವರ್‌ನೊಳಗಿದ್ದ ಹಳದಿ ಬಣ್ಣದ ಕವರ್‌ನಲ್ಲಿ ಒಣಗಿದ ಗಾಂಜಾ ಸೊಪ್ಪು ಪತ್ತೆಯಾಗಿದೆ. ಇದಲ್ಲದೆ ರೂ. 500 ಮುಖಬೆಲೆಯ ಮೂರು ನೋಟುಗಳು ಸಿಕ್ಕಿವೆ. ವಿಚಾರಣೆಯಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಈ ಹಿನ್ನೆಲೆಯಲ್ಲಿ ಅರೇಹಳ್ಳಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










