ಹಾಸನ, ನವೆಂಬರ್ 16: ಆಲೂರು ತಾಲೂಕಿನ ಸಂಕ್ಲಾಪುರ ಮಠದ ಕಿರಿಯ ಸ್ವಾಮೀಜಿಯಾಗಿ ನೇಮಕಗೊಂಡಿರುವ ಮಂಜುನಾಥ ಸ್ವಾಮೀಜಿ ಅವರನ್ನು ತಣ್ಣೀರು ಹಳ್ಳ ಮಠದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ವಿಜಯಕುಮಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೆಟ್ಟದಪುರ ಕನ್ನಡ ಮಠದ ಮಠಾಧೀಶ ಶ್ರೀ ಚನ್ನಬಸವೇಶ್ವರ ದೇಶಿಕೇಂದ್ರ ಸ್ವಾಮೀಜಿ,
“ಕಿರಿಯ ಸ್ವಾಮೀಜಿಯಾಗುವುದು ದೊಡ್ಡ ಜವಾಬ್ದಾರಿ. ಹಿರಿಯರ ಸೇವೆ ಮತ್ತು ಭಕ್ತ–ಸಾರ್ವಜನಿಕರ ಸೇವೆಗಳನ್ನು ನಿಭಾಯಿಸಲು ಭಕ್ತ ಸಮುದಾಯದ ಸಹಕಾರ ಅತ್ಯವಶ್ಯಕ” ಎಂದು ಹೇಳಿದರು.

ಸುಮಾರು 7 ವರ್ಷಗಳಿಂದ ತಣ್ಣೀರು ಹಳ್ಳ ಮಠದಲ್ಲಿ ಶ್ರೀ ವಿಜಯಕುಮಾರ್ ಸ್ವಾಮೀಜಿಗಳ ಜತೆ ಪೂಜೆ–ಸೇವೆ ಮತ್ತು ಮಠದ ದೈನಂದಿನ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮಂಜುನಾಥ ಸ್ವಾಮೀಜಿಯವರು ಈಗ ಸಂಕ್ಲಾಪುರ ಮಠದ ಕಿರಿಯ ಸ್ವಾಮೀಜಿಗಳಾಗಿ ನೇಮಕಗೊಂಡಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ ಎಂದರು.
ತಣ್ಣೀರು ಹಳ್ಳ ಮಠದ ಮಠಾಧೀಶ ವಿಜಯಕುಮಾರ್ ಸ್ವಾಮೀಜಿ ಮಾತನಾಡಿ, “ಸಂಕ್ಲಾಪುರ ಮಠದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿಗಳು ಹಾಗೂ ಭಕ್ತರ ಅಭಿಲಾಷೆಯಂತೆ ಮಂಜುನಾಥ ಸ್ವಾಮೀಜಿಯವರು ಕಿರಿಯ ಸ್ವಾಮೀಜಿಗಳಾಗಿ ನೇಮಕವಾಗಿರುವುದು ಹರ್ಷದ ಸಂಗತಿ. ತಣ್ಣೀರು ಹಳ್ಳ ಮಠದಲ್ಲಿ ಅವರು ಸಲ್ಲಿಸಿದ ಸೇವೆ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಕ್ಲಾಪುರ ಮಠದಲ್ಲಿ ನವೆಂಬರ್ 17 ಮತ್ತು 18 ರಂದು ನೂತನ ಕಿರಿಯ ಸ್ವಾಮೀಜಿಗಳ ಸೇವಾದೀಕ್ಷಾ ಕಾರ್ಯಕ್ರಮ ನಡೆಯಲಿದ್ದು, ಅದರ ಅಂಗವಾಗಿ ಇಂದು ಮಂಜುನಾಥ್ ಸ್ವಾಮೀಜಿಗಳನ್ನು ತಣ್ಣೀರು ಹಳ್ಳ ಮಠದಿಂದ ಭಕ್ತರ ಸಮ್ಮುಖದಲ್ಲಿ ಸಂಕ್ಲಾಪುರ ಮಠಕ್ಕೆ ಗೌರವ ಸತ್ಕಾರದೊಂದಿಗೆ ಕರೆದೊಯ್ಯಲಾಯಿತು.
ಕಾರ್ಯಕ್ರಮದಲ್ಲಿ ತಣ್ಣೀರು ಹಳ್ಳ ಮಠದ ಕಾರ್ಯದರ್ಶಿ ಹಾಗೂ ಅಡಿಟರ್ ಕಾಂತರಾಜ್, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸೋಮಣ್ಣ, ಹಾಸನ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಈಶ್ವರಹಳ್ಳಿ ಶಿವಣ್ಣ, ಮಡಬಲು ಕಾಂತರಾಜ್, ಚಿಕ್ಕೋಟೆ ಮಹೇಶ್, ಈಶ್ವರಹಳ್ಳಿ ನಿರಂಜನ್, ಸಂಕ್ಲಾಪುರ ಮಠದ ಆಡಳಿತ ಸಮಿತಿ ಸದಸ್ಯರು, ಭಕ್ತರು ಹಾಗೂ ತಣ್ಣೀರು ಹಳ್ಳ ಮಠದ ಮ್ಯಾನೇಜರ್ ಶಂಕರ್ ಉಪಸ್ಥಿತರಿದ್ದರು.
ಮಂಜುನಾಥ ಸ್ವಾಮೀಜಿ ಅವರನ್ನು ತಣ್ಣೀರು ಹಳ್ಳಿ ಮಠದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು










