ಹಾಸನ, ನವೆಂಬರ್ 10:ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ, ರುದ್ರಪಟ್ಟಣ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಬಸವರಾಜು ಮಕಣಾಪುರ ಅವರನ್ನು ಪೌತಿ ಖಾತೆ ಮಾಡಿಕೊಡಲು ಲಂಚ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಣ ಪಡೆಯುವ ವಿಡಿಯೋ ಹರಿದಾಡಿದ್ದು, ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಡಿಯೋದಲ್ಲಿನ ದೃಶ್ಯಾವಳಿಗಳ ಪ್ರಾಥಮಿಕ ತನಿಖೆಯ ಪ್ರಕಾರ, ಬಸವರಾಜು ಅವರು ರುದ್ರಪಟ್ಟಣ ಗ್ರಾಮದ ನಿವಾಸಿ ಜಗದೀಶ ಬಿನ್ ನಾರಾಯಣಗೌಡ ಅವರಿಂದ ಪೌತಿ ಖಾತೆ ಇ-ಪೌತಿ ಆನ್‌ಲೈನ್ ಮೂಲಕ ಪ್ರಕ್ರಿಯೆ ಮಾಡಲು ಹಣ ಸ್ವೀಕರಿಸಿರುವುದು ಸ್ಪಷ್ಟವಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯ ಆದೇಶದನ್ವಯ, ಬಸವರಾಜು ಮಕಣಾಪುರರನ್ನು ನವೆಂಬರ್ 10ರಿಂದ ಅಮಾನತ್ತಿನಲ್ಲಿಟ್ಟು, ಅವರ ಹುದ್ದೆಯ ಹಕ್ಕನ್ನು (lien) ಬೇಲೂರು ತಾಲ್ಲೂಕು ಕಛೇರಿ ಭೂಮಿ ಶಾಖೆಗೆ ಸ್ಥಳಾಂತರಿಸಲಾಗಿದೆ.










