Hassan|ಹಾಸನ: “ನಿಮಗೆ ಸಿಕ್ಕಿರುವ ಉಪಮುಖ್ಯಮಂತ್ರಿ ಸ್ಥಾನ ನಾಡಿನ ಜನರು ಹಾಕಿರುವ ಭಿಕ್ಷೆ. ಅದನ್ನು ಕಣ್ಣಿಗೆ ಒತ್ತಿಕೊಂಡು, ತಲೆಬಾಗಿ ಕೆಲಸ ಮಾಡಿ. ಅದನ್ನು ಬಿಟ್ಟು ದುಡ್ಡಿನ ಮದ ತಲೆಗೇರಿದವರಂತೆ ದುರಹಂಕಾರದಿಂದ ವರ್ತಿಸಬೇಡಿ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಟೀಕೆಗಳಿಗೆ ಹಾಗೂ ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟಗಳ ವಿರುದ್ಧ ಹಿಗ್ಗಾಮುಗ್ಗಾ ಜಾಡಿಸಿದರು.
’ನನ್ನ ಸ್ಟೇಟಸ್ ಬಗ್ಗೆ ಚಿಂತೆ ಬೇಡ, ಡಿಸಿಎಂ ಪಟ್ಟ ಜನರ ಭಿಕ್ಷೆ’
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಜೆಡಿಎಸ್ ಕೇವಲ 17 ಸ್ಥಾನಗಳಿಗೆ ಕುಸಿದಿದೆ ಎಂದು ಡಿಕೆಶಿ ಲೇವಡಿ ಮಾಡಿದ್ದಕ್ಕೆ ನಿಖಿಲ್ ತಿರುಗೇಟು ನೀಡಿದರು.
”ಡಿ.ಕೆ.ಶಿವಕುಮಾರ್ ಅವರು ನನ್ನ ಸ್ಟೇಟಸ್ (ಅರ್ಹತೆ/ಸ್ಥಾನಮಾನ) ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರಿಗೆ ಜನ ಡಿಸಿಎಂ ಸ್ಟೇಟಸ್ ಕೊಟ್ಟಿದ್ದಾರಲ್ಲ, ಅದು ನಾಡಿನ ಜನರ ಭಿಕ್ಷೆ. ಅಧಿಕಾರ ಸಿಕ್ಕಾಗ ದುರಹಂಕಾರ ಪಡಬಾರದು. ದುಡ್ಡಿನ ಮದ ತಲೆಗೇರಿದಂತೆ ಜಾಸ್ತಿ ಮಾತನಾಡದೆ, ತಲೆ ತಗ್ಗಿಸಿ ಜನರಿಗೆ ಗೌರವದಿಂದ ದುಡಿಯುವ ಕೆಲಸ ಮಾಡಲಿ” ಎಂದು ನಿಖಿಲ್ ಎಚ್ಚರಿಸಿದರು.
ಡಿ.ಕೆ.ಶಿವಕುಮಾರ್‌ಗೆ ನಿಖಿಲ್ ಎಸೆದ ಪ್ರಶ್ನೆಗಳು:
- 136 ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷದ ಡಿಸಿಎಂ ಆಗಿರುವ ನೀವು, ‘ಡಿಸೈನ್ ಬಾಕ್ಸ್’ (Design Box) ಎಂಬ ಪಿಆರ್ ಟೀಂ ಇಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದೀರಿ, ಮುಂದೆ ಏನಾಗುತ್ತೆ ಎಂದು ಜನರಿಗೆ ಗೊತ್ತಾಗುತ್ತಿಲ್ಲವಲ್ಲ?
- ನಿಖಿಲ್ ಕುಮಾರಸ್ವಾಮಿ ಏನು ಎಂದು ಮುಂದಿನ ದಿನಗಳಲ್ಲಿ ಜನರೇ ತೋರಿಸಿಕೊಡುತ್ತಾರೆ. ಮಿಸ್ಟರ್ ಶಿವಕುಮಾರ್ ಅವರು ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳುವುದು, ಲಘುವಾಗಿ ಮಾತನಾಡುವುದು ಬೇಡ.
’ಸಹೋದರನಿಗೆ ಕೂಲಿ ಸಿಕ್ಕಿಲ್ಲ ಅಂತಾ ದೆಹಲಿಗೆ ಹೋಗ್ತಾರೆ!’
ಡಿ.ಕೆ.ಸುರೇಶ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಲೇವಡಿ ಮಾಡಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಹತಾಶೆಯನ್ನು ವ್ಯಂಗ್ಯವಾಡಿದರು.
”ಕಾಂಗ್ರೆಸ್ ನಾಯಕರು ಮಾತೆತ್ತಿದರೆ, ಪಾಪ ಅವರ ಸಹೋದರ ‘ನನಗೆ ಕೂಲಿ ಸಿಕ್ಕಿಲ್ಲ, ಕೂಲಿ ಸಿಕ್ಕಿಲ್ಲ’ ಅಂತ ಬೀದಿಯಲ್ಲಿ ಬಾಯಿ ಬಡಿದುಕೊಂಡು ಓಡಾಡ್ತಾರೆ, ದೆಹಲಿಗೆ ಹೋಗ್ತಾರೆ. 136 ಸೀಟು ಗೆಲ್ಲಿಸಿ ಅಧಿಕಾರ ಕೊಟ್ಟರೆ, ಇಲ್ಲಿಯವರೆಗೆ ಸಿಎಂ ಹಾಗೂ ಡಿಸಿಎಂ ಕುರ್ಚಿಗಾಗಿ ಕಿತ್ತಾಟ, ಬಡಿದಾಟ, ರಂಪಾಟ ನಡೆಯುತ್ತಿದೆ. ಇವರ ಸ್ಥಿತಿ ನೋಡಿ ಜನರು ನಗುವ ಪರಿಸ್ಥಿತಿ ಬಂದಿದೆ” ಎಂದು ಲೇವಡಿ ಮಾಡಿದರು.
- ಕುಣಿಯಲಾರದವಳು ನೆಲ ಡೊಂಕು ಅಂದಳಂತೆ: “ತಮ್ಮ ಸಹೋದರ ದುಡಿದಿದ್ದೀನಿ, ದುಡಿದಿದ್ದೀನಿ ಅಂತಾರಲ್ಲ, ಅದೆಂತದೋ ಕೂಲಿ ಹೋಗಿ ದೆಹಲಿಯಿಂದಲೇ ತಗೊಂಡು ಬರಲಿ. ಇವರದ್ದು ‘ಕುಣಿಯಲಾರದವಳು ನೆಲ ಡೊಂಕು’ ಅಂದಹಾಗೆ ಆಗಿದೆ. ಇವರು ಹತಾಶರಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
2028ಕ್ಕೆ ಡಿ.ಕೆ.ಶಿವಕುಮಾರ್ ಮಾಜಿ ಆಗ್ತಾರೆ!
”ನನ್ನ (ನಿಖಿಲ್) ಬಗ್ಗೆ ಚರ್ಚೆ ಮಾಡುವುದು ಬೇಡ. 2028ಕ್ಕೆ ಇದೇ ಡಿ.ಕೆ.ಶಿವಕುಮಾರ್ ಅವರು ಮಾಜಿ ಆಗ್ತಾರೆ ಹೊರತು, ಹಾಲಿ ಆಗಿ ಇರಲ್ಲ. ಅಧಿಕಾರ ಅನ್ನೋದು ಯಾರಿಗೂ ಶಾಶ್ವತ ಅಲ್ಲ. ಮಾತನಾಡುವ ಮುನ್ನ ಎಚ್ಚರಿಕೆ ಇರಲಿ, ದುರಹಂಕಾರ ಬೇಡ” ಎಂದು ನಿಖಿಲ್ ಕುಮಾರಸ್ವಾಮಿ ಗುಡುಗಿದ್ದಾರೆ. ಜಿಬಿಐಟಿ ವಿಚಾರಕ್ಕೆ ಸಂಬಂಧಿಸಿದಂತೆಯೂ ಡಿಕೆಶಿ ಹೇಳಿಕೆಯನ್ನು ತಾವು ಗಮನಿಸಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದರು.










