Hassan|ಹಾಸನ: ಬೆಂಗಳೂರಿನ ಬಿಡದಿ ಬಳಿ ಉದ್ದೇಶಿತ ‘ಜಿಬಿಐಟಿ’ (GBIT) ಪ್ರಾಜೆಕ್ಟ್ ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ಉಲ್ಲೇಖಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅಧಿಕಾರ ಯಾರಿಗೂ ಶಾಶ್ವತವಲ್ಲ, 2028ಕ್ಕೆ ಮಿಸ್ಟರ್ ಡಿ.ಕೆ.ಶಿವಕುಮಾರ್ ಮಾಜಿ ಆಗ್ತಾರೆ, ಇದು ತಲೆಯಲ್ಲಿರಲಿ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಇಂದು ನಡೆದ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ನಿಖಿಲ್ ಕುಮಾರಸ್ವಾಮಿ, ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
’ಅಲ್ಲಿ ಇದ್ದವರು ರೈತರಲ್ಲ, ರಿಯಲ್ ಎಸ್ಟೇಟ್ ದಲ್ಲಾಳಿಗಳು!’
ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ನಡೆಸಿದ ಸಭೆಯನ್ನು ವ್ಯಂಗ್ಯವಾಡಿದ ನಿಖಿಲ್ ಕುಮಾರಸ್ವಾಮಿ, “ಕುಮಾರಣ್ಣ ಹಾಗೂ ದೇವೇಗೌಡರು ಜಂಟಿ ಸುದ್ದಿಗೋಷ್ಠಿ ಮಾಡಿದ ಮೇಲಂತೂ ಇವರ ಒಳಗೆ ತಳಮಳ ಶುರುವಾಗಿದೆ. ಹಾಗಾಗಿಯೇ ಇವತ್ತು ರೈತ ಮುಖಂಡರು ಅಂತಾ ಕೆಲವರನ್ನು ಕರೆಸಿ ನಾಟಕ ಆಡಿದ್ದಾರೆ. ಬೆಂಗಳೂರಿನ ಅವರ ಕಚೇರಿಯಲ್ಲಿ ಕುಳಿತಿದ್ದವರ ಮುಖ ನೋಡಿದ್ರಾ? ಅವರು ಯಾರಾದರೂ ರೈತರ ತರ ಕಂಡ್ರಾ?” ಎಂದು ಪ್ರಶ್ನಿಸಿದರು.
”ಅಲ್ಲಿ ಕುಳಿತಿದ್ದವರೆಲ್ಲ ರಿಯಲ್ ಎಸ್ಟೇಟ್ ದಂಧೆಕೋರರು ಮತ್ತು ದಲ್ಲಾಳಿಗಳು. ಯಾರಾದರೂ ಒಬ್ಬರ ಹೆಗಲ ಮೇಲೆ ಹಸಿರು ಶಾಲು ಇತ್ತಾ? ಕಾಂಗ್ರೆಸ್ ಮುಖಂಡರನ್ನು, ದಲ್ಲಾಳಿ ಕಮಿಷನ್ ಏಜೆಂಟ್‌ಗಳನ್ನು ಹಾಗೂ ಬ್ರೋಕರ್‌ಗಳನ್ನು ಕೂರಿಸಿಕೊಂಡು ಡಿ.ಕೆ.ಶಿವಕುಮಾರ್ ಅವರು ಕಾಟಾಚಾರದ ಅಭಿಪ್ರಾಯ ಸಂಗ್ರಹ ಸಭೆ ಮಾಡಿದ್ದಾರೆ. ಇವರದ್ದೆಲ್ಲಾ ಬರೀ ದರ್ಪದ ಮಾತುಗಳು” ಎಂದು ಕಿಡಿಕಾರಿದರು.
80% ಜನ ಒಪ್ಪಿದ್ದಾರೆ ಅನ್ನೋಕೆ ಏನ್ ಬಂದಿದ್ದೇನಪ್ಪಾ ಸಾಹೇಬ?
”ಶೇಕಡಾ 80 ರಷ್ಟು ಜನ ಭೂಸ್ವಾಧೀನಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಏನ್ ಬಂದಿದ್ದೇನಪ್ಪಾ ಸಾಹೇಬ ನಿಮಗೆ? ಮೊದಲು ಮೈ ಕೈ ಒದರಿಕೊಂಡು ಕೆಳಗೆ ಇಳಿದು ಬನ್ನಿ” ಎಂದು ನಿಖಿಲ್ ಅಸಮಾಧಾನ ಹೊರಹಾಕಿದರು.
- ನಿಜವಾದ ರೈತರ ಸ್ಥಿತಿ: “ಅಲ್ಲಿ ಸಣ್ಣ ರೈತರು ಒಂದು ತುಂಡು ಭೂಮಿ ಇಟ್ಟುಕೊಂಡು, ಹೈನುಗಾರಿಕೆ ಮಾಡಿಕೊಂಡು ಗೌರವಯುತವಾಗಿ ಜೀವನ ಮಾಡುತ್ತಿದ್ದಾರೆ. ಇವರು ಆ ಬಡ ರೈತರ ಹೊಟ್ಟೆಗೆ ಕನ್ನ ಹಾಕಲು ಹೊರಟಿದ್ದಾರೆ.”
- ದಂಧೆಕೋರರಿಗೆ ಅನುಕೂಲ: “ಮತ್ಯಾರಿಗೋ ಕೋಟಿ ಕೋಟಿ ಹಣ ಸಿಗುತ್ತದೆ ಎಂದು ಬೆಂಗಳೂರಿನಿಂದ ಬಂದು ಇನ್ವೆಸ್ಟ್ ಮಾಡಿದ್ದಾರಲ್ಲ, ಅಂತಹ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಅನುಕೂಲ ಮಾಡಿಕೊಡಲು ಈ ಪ್ರಾಜೆಕ್ಟ್ ಮಾಡಲಾಗುತ್ತಿದೆಯೇ?” ಎಂದು ನಿಖಿಲ್ ಪ್ರಶ್ನಿಸಿದರು.
2028ಕ್ಕೆ ಡಿ.ಕೆ.ಶಿವಕುಮಾರ್ ಮಾಜಿ ಆಗ್ತಾರೆ!
”80% ಜನ ಒಪ್ಪಿಕೊಂಡಿದ್ದಾರೆ ಅಂತ ಇವರೇ ತೀರ್ಮಾನ ಮಾಡಿಬಿಟ್ಟರಾ? ಸ್ಥಳಕ್ಕೆ ಹೋಗಿ ಇವರೇನಾದರೂ ಪರಿಶೀಲನೆ ಮಾಡಿದ್ದಾರಾ? ಅಧಿಕಾರಿಗಳು ಹಳ್ಳಿಗಳಿಗೆ ಹೋಗಿ ಸಭೆ ನಡೆಸಿದ್ದಾರಾ? ನಿಜವಾದ ರೈತರನ್ನು ಭೇಟಿ ಮಾಡಿದ್ದಾರಾ?” ಎಂದು ಪ್ರಶ್ನಿಸಿದ ನಿಖಿಲ್, ಈ ದುರಹಂಕಾರದ ದರ್ಪದ ಮಾತು ಬಹಳ ದಿನ ನಡೆಯುವುದಿಲ್ಲ. ಮಿಸ್ಟರ್ ಡಿ.ಕೆ.ಶಿವಕುಮಾರ್ ಸಾಹೇಬರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇದೇ ವೇಳೆ ತಮ್ಮ ರಾಜಕೀಯ ಭವಿಷ್ಯ ಹಾಗೂ ಸ್ಟೇಟಸ್ ಕುರಿತು ಮಾತನಾಡಿದ ಅವರು, “ನನ್ನ ಸ್ಟೇಟಸ್ ಬಗ್ಗೆ ಯಾರೂ ಚರ್ಚೆ ಮಾಡುವುದು ಬೇಡ. ಅಧಿಕಾರ ಅನ್ನೋದು ಯಾರಿಗೂ ಶಾಶ್ವತ ಅಲ್ಲ. 2028ರ ಚುನಾವಣೆ ಮುಗಿಯುತ್ತಿದ್ದಂತೆ ಮಿಸ್ಟರ್ ಡಿ.ಕೆ.ಶಿವಕುಮಾರ್ ಮಾಜಿ ಆಗ್ತಾರೆ, ಆ ಅರಿವು ಅವರ ತಲೆಯಲ್ಲಿ ಇರಲಿ” ಎಂದು ಖಾರವಾಗಿ ಎಚ್ಚರಿಸಿದರು.










