​Hassan:”ಪುಷ್ಪಗಿರಿ ಮಠಕ್ಕೆ ಮರಳುವುದಿಲ್ಲ, ಅಲ್ಲಿಂದ ಏನನ್ನೂ ತಂದಿಲ್ಲ, ಆತಂಕ ಬೇಡ”: ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸ್ಪಷ್ಟನೆ

Hassan:ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ನಡೆದ ಇಷ್ಟಲಿಂಗ ಪೂಜೆ ಹಾಗೂ ಶಿವಾನುಭವ ಗೋಷ್ಠಿಯಲ್ಲಿ ಸೀಗೆಗುಡ್ಡದ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು “ಪುಷ್ಪಗಿರಿ ಮಠಕ್ಕೆ ಮರಳುವುದಿಲ್ಲ” ಎಂದು ಸ್ಪಷ್ಟನೆ ನೀಡಿದರು.

Hassan/ಬೇಲೂರು, ಮೇ 18:“ನಾವು ಪುಷ್ಪಗಿರಿ ಮಠ ಹಾಗೂ ನಂದಿಗುಡಿ ವೃಷಭಪುರಿ ಮಠಕ್ಕೆ ಅಡಿಪಾಯ ಹಾಕಿದ್ದಲ್ಲದೆ, ಸಮಾಜದ ಸಂಘಟನೆಗೆ ಒತ್ತು ನೀಡಿರುವುದು ಎಲ್ಲರಿಗೂ ತಿಳಿದಿದೆ. ಪೀಠವನ್ನು ತ್ಯಾಗ ಮಾಡಿದ ಬಳಿಕ ಅಲ್ಲಿಂದ ಯಾವುದೇ ಸಂಪತ್ತನ್ನು ತಂದಿಲ್ಲ. ನಮ್ಮನ್ನು ಇಷ್ಟಪಡುವ ಭಕ್ತರು ನಮಗೆ ಸೀಗೆಗುಡ್ಡದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಕೆಲವರು ನಾನು ಪುಷ್ಪಗಿರಿ ಮಠಕ್ಕೆ ಮರಳುತ್ತೇನೆ ಎಂದು ಆತಂಕಪಡುವ ಅಗತ್ಯವಿಲ್ಲ” ಎಂದು ಹಾಸನ ಸೀಗೆಗುಡ್ಡ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದರು.

​ತಾಲೂಕಿನ ಹೆಬ್ಬಾಳು ಗ್ರಾಮದ ಗೌರಿಶಂಕರ ಗೃಹದಲ್ಲಿ ನಡೆದ ಇಷ್ಟಲಿಂಗ ಪೂಜೆ ಹಾಗೂ ಶಿವಾನುಭವ ಗೋಷ್ಠಿಯ ದಿವ್ಯಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪೀಠತ್ಯಾಗದ ಬಳಿಕ ಸಂಪತ್ತು ತಂದಿಲ್ಲ:

“ವಿದ್ಯಾರ್ಥಿ ದಿಸೆಯಲ್ಲಿಯೇ ನಾವು ಯಲಗುಂದ ಮಠಕ್ಕೆ ಸ್ವಾಮೀಜಿಗಳಾಗಿದ್ದೆವು. ಬಳಿಕ ದಾವಣಗೆರೆ ಜಿಲ್ಲೆಯ ನಂದಿಗುಡಿ ಮಠಕ್ಕೆ ಪೀಠಾಧಿಪತಿಗಳಾದೆವು. ಪೂಜ್ಯ ಶ್ರೀ ಬಸವರಾಜೇಂದ್ರ ಮಹಾಸ್ವಾಮೀಜಿಗಳು ಲಿಂಗೈಕ್ಯರಾದ ತರುವಾಯ ಭಕ್ತರ ಅಭಿಲಾಷೆಯಂತೆ ಪುಷ್ಪಗಿರಿ ಮಠದ ಜವಾಬ್ದಾರಿ ಹೊತ್ತು, ಭಕ್ತರ ಸಹಕಾರದಿಂದ ಉಭಯ ಮಠಗಳ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಪೀಠತ್ಯಾಗದ ನಂತರ ಅಲ್ಲಿನ ವಸ್ತುಗಳೆಲ್ಲವೂ ಭಕ್ತರಿಗೆ ಸೇರಿವೆ ಎಂದು ನಾವು ಏನನ್ನೂ ನಮ್ಮೊಡನೆ ತಂದಿಲ್ಲ. ಆ ಕಾರಣದಿಂದಲೇ ಭಕ್ತರು ನಮ್ಮನ್ನು ಇಲ್ಲಿಯತನಕ ಕೈಬಿಡದೆ ಪ್ರೀತಿ, ಅಭಿಮಾನ ತೋರುತ್ತಿರುವುದು ನಮ್ಮ ಪುಣ್ಯ” ಎಂದು ಸ್ಮರಿಸಿದರು.

ಕಾಯಕವೇ ಕೈಲಾಸ:

“ಆಹ್ವಾನಿಸುವ ಭಕ್ತರ ಮನೆಗೆ ತೆರಳಿ ಪೂಜೆ ನೆರವೇರಿಸುವುದು ಹಾಗೂ ಹಿತವಚನ ಹೇಳುವುದು ನಮ್ಮ ಧರ್ಮ. ಬೇರೆ ಪೀಠಗಳ ಬಗ್ಗೆ ಕನಿಷ್ಠ ಸೌಜನ್ಯಕ್ಕೂ ಚರ್ಚಿಸಲು ನಮಗೆ ಸಮಯವಿಲ್ಲ. ನಾವು ಈಗಲೂ ಕಾಯಕ ಮತ್ತು ದಾಸೋಹದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

​ಹೆಬ್ಬಾಳು ಗ್ರಾಮ ಪಂಚಾಯಿತಿ ಮಾಜಿ ಪ್ರಧಾನ ಬಿ.ಎಂ. ದೊಡ್ಡವೀರೇಗೌಡ ಮಾತನಾಡಿ, “ಲಿಂ. ಪೂಜ್ಯ ಶ್ರೀ ಬಸವರಾಜೇಂದ್ರ ಮಹಾಸ್ವಾಮೀಜಿಗಳ ಆಶಯದಂತೆ ಭಕ್ತರು ಪುಷ್ಪಗಿರಿಯಲ್ಲಿ ಮಠ ನಿರ್ಮಿಸಿದ್ದರು. ಅವರು ಲಿಂಗೈಕ್ಯರಾದ ಬಳಿಕ ಭಕ್ತರ ಬೇಡಿಕೆಯಂತೆ ಪೂಜ್ಯ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ಅಧಿಕಾರ ವಹಿಸಿಕೊಂಡು ಮಠದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದನ್ನು ಯಾರೂ ಮರೆಯುವಂತಿಲ್ಲ. ಸದ್ಯ ಸೀಗೆಗುಡ್ಡದ ಮಠದಲ್ಲಿಯೂ ಅವರು ನಿತ್ಯ ದಾಸೋಹ ಆರಂಭಿಸಿದ್ದು, ಅವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯವಾಗಿದೆ” ಎಂದರು.

ಪಾಲ್ಗೊಂಡಿದ್ದ ಗಣ್ಯರು:

ಈ ಸಂದರ್ಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಪ್ರಧಾನ ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಧನಂಜಯ್, ನಿವೃತ್ತ ಪಿಡಿಒ ರಾಜಶೇಖರ್, ನಿವೃತ್ತ ಶಿಕ್ಷಕರಾದ ಧನಂಜಯ್, ರಮೇಶಪ್ಪ, ದೊಡ್ಡಬ್ಯಾಡಿಗೆರೆ ಮಲ್ಲೇಶ್, ಚನ್ನಬಸವೇಶ್ವರ ದೇಗುಲದ ಖಜಾಂಚಿ ವೇ. ಮೋಹನ್, ರಾಮೇದೇವರಹಳ್ಳಿ ಮಲ್ಲೇಶಣ್ಣ, ಪುಟ್ಟಬಸವಯ್ಯ, ಪ್ರಕಾಶಣ್ಣ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ವಿನುತಾ ಧನಂಜಯ್, ಯುವ ಘಟಕದ ಮಾಜಿ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ಬಸವರಾಜ್, ಉದಯ್, ಸುಂದ್ರಣ್ಣ, ಪುನೀತ್, ವೇದಮೂರ್ತಿ ಮತ್ತಿತರರು ಹಾಜರಿದ್ದರು.

“ಅಮೋಘ ಸಾಧನೆ: ಪೂಜ್ಯರ ಪೂಜೆ ಭಕ್ತಿಪೂರ್ವಕ”

ದಾವಣಗೆರೆ ಜಿಲ್ಲೆಯ ನಂದಿಗುಡಿ ವೃಷಭಪುರಿ ಮಠ ಹಾಗೂ ಪುಷ್ಪಗಿರಿ ಮಠದ ಸರ್ವತೋಮುಖ ಅಭಿವೃದ್ಧಿಗೆ ಪೂಜ್ಯ ಶ್ರೀ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ನೀಡಿರುವ ಕೊಡುಗೆ ನಿಜಕ್ಕೂ ಅಗಮ್ಯವಾಗಿದೆ. ಗೌರಿಶಂಕರ ನಿಲಯದಲ್ಲಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆಯನ್ನು ಪೂಜ್ಯರು ಅತ್ಯಂತ ಭಕ್ತಿಯಿಂದ ನಡೆಸಿಕೊಟ್ಟಿದ್ದಾರೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಶ್ಲಾಘಿಸಿದರು.