10.4 C
Munich
Home News ಹಾಸನ: ಎಲ್ಲೆಡೆ ಆರೋಗ್ಯ ಸೇವೆ ಸಿಗಲಿ ಹಾಲು ಉತ್ಪಾದಕರಿಗೆ ಕೂಡಲೇ ಹಣ ಸಂದಾಯ ಆಗಲಿ: ಸಂಸದ...

ಹಾಸನ: ಎಲ್ಲೆಡೆ ಆರೋಗ್ಯ ಸೇವೆ ಸಿಗಲಿ ಹಾಲು ಉತ್ಪಾದಕರಿಗೆ ಕೂಡಲೇ ಹಣ ಸಂದಾಯ ಆಗಲಿ: ಸಂಸದ ಶ್ರೇಯಸ್

ಹಾಸನ: ಜನರಿಗೆ ಸುಲಭವಾಗಿ ಆರೋಗ್ಯ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಸುಸಜ್ಜಿತವಾಗಿರುವಂತೆ ನೋಡಿಕೊಂಡು ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ರವಾನೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಸೂಚಿಸಿದರು.

ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿಂದು ನಡೆದ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹವಾಮಾನ ವೈಪರೀತ್ಯ ಹಿನ್ನೆಲೆ ಆರೋಗ್ಯ ಸೌಲಭ್ಯಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕೆಂದರು.

ಹೈನುಗಾರಿಕೆ ಪ್ರಮುಖ ಜೀವನಾಧಾರವಾಗಿರುವ ಜಿಲ್ಲೆಯಲ್ಲಿ ಹಾಲು ಉತ್ಪಾದಕರಿಗೆ ಸಂದಾಯ ಆಗಬೇಕಿರುವ ಹಣವನ್ನು ಕೂಡಲೇ ವಿತರಿಸಬೇಕು. ಬಾಕಿ ಉಳಿಸಿ ಕೊಳ್ಳಬಾರದು, ಮಹಿಳೆಯರೇ ಹೆಚ್ಚಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿಸಿ ಕೊಂಡಿದ್ದು ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕಿದೆ. ಇದಲ್ಲದೆ ಇದಕ್ಕೆ ಅಗತ್ಯ ಇರುವ ಪಶು ಆಹಾರ ಹಾಗೂ ಔಷಧಿ ಮತ್ತು ಇನ್ನಿತರ ಉಪಕರಣ ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದರು.

ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಇಲಾಖೆ ವತಿಯಿಂದ ಮಾಡಬೇಕು, ಪಾಠ ಮಾಡಲು ಯೋಗ್ಯವಲ್ಲದ ಶಾಲಾ ಕಟ್ಟಡಗಳಲ್ಲಿ ಮಕ್ಕಳಿಗೆ ವಿದ್ಯಾಬ್ಯಾಸ ಬೇಡ, ಕಟ್ಟಡಗಳ ದುರಸ್ತಿ ಬಳಿಕವೇ ಅವುಗಳನ್ನು ಪಾಠ ಮಾಡಲು ಬಳಸಬೇಕು.ಇಲ್ಲವಾದರೆ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದರು.

ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆ ಶೇ. ನೂರರಷ್ಟು ಫಲಿತಾಂಶ ಬರುವ ಸಲುವಾಗಿ ಎಲ್ಲಾ ಪೂರ್ವ ತಯಾರಿ ಮಾಡಬೇಕೆಂದರು.

ಪ್ರಾಥಮಿಕ ಶಾಲಾ ಶಿಕ್ಷಕರು ಮನಸ್ಸಿಗೆ ಬಂದ ಸಮಯಕ್ಕೆ ಶಾಲೆಗೆ ಬರುವುದು, ಮೊಬೈಲ್ ನೋಡಿಕೊಂಡು ಕಾಲಹರಣ ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಅಂತಹವರ ಬಗ್ಗೆ ಎಚ್ಚರ ವಹಿಸಬೇಕು.
ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಅವರನ್ನು ಹಿಡಿತದಲ್ಲಿಟ್ಟುಕೊಳ್ಳುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳ ವಸತಿನಿಲಯಗಳಲ್ಲಿ ಗುಣಮಟ್ಟದ ಆಹಾರ ವಿತರಣೆಗೆ ಹೆಚ್ಚಿನ ಗಮನಹರಿಸಬೇಕು, ಮೂಲಭೂತ ಸೌಕರ್ಯ ಕೊರತೆ ಆಗಬಾರದು. ಇದರ ಜೊತೆ ಎಲ್ಲಾ ಶಾಲೆಗಳು ಹಾಗೂ ಹಾಸ್ಟೆಲ್ ಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೆ ಸ್ಕಾಲರ್‌ಶಿಪ್ ವಿತರಣೆಯೂ ಸಮರ್ಪಕವಾಗಿ ನಡೆಯಬೇಕು, ಮಹಿಳಾ ವಸತಿ ನಿಲಯಗಳಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸೂಚಿಸಿದರು.

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಡಯಾಲಿಸಿಸ್, ಸ್ಕ್ಯಾನಿಂಗ್ ಸೇರಿದಂತೆ ಇನ್ನಿತರೆ ವೈದ್ಯಕೀಯ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸಬಾರದು. ಅಂತಹ ಪ್ರಕರಣ ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಜನರ ಅನುಕೂಲಕ್ಕೆ ಸರ್ಕಾರ ಒದಗಿರುವ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.

ಸರ್ಕಾರಿ ಆಂಬ್ಯುಲೆನ್ಸ್ ಸರಿಯಾಗಿ ಬಳಕೆಗೆ ಬರುತ್ತಿಲ್ಲ, ೧೦೮ ಆಂಬ್ಯುಲೆನ್ಸ್ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸುವ ಬದಲಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಕರಣ ಕೇಳಿ ಬರುತ್ತಿವೆ. ಈ ರೀತಿ ಮಾಡುತ್ತಿರುವ ಡ್ರೈವರ್‌ಗಳ ವಿರುದ್ಧ ಕ್ರಮ ಜರುಗಿಸಬೇಕು, ಅವರು ಖಾಗಿಯವರ ಜೊತೆ ಶಾಮೀಲಾಗಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ರೈತರು ಮತ್ತು ಸಾರ್ವಜನಿಕರು ಸೇರಿದಂತೆ ಜನಪ್ರತಿನಿಧಿಗಳಿಗೂ ಪರಿಹಾರದ ಮಾಹಿತಿ ಇರುವುದಿಲ್ಲ. ಹಾಗಾಗಿ ಅಧಿಕಾರಿಗಳು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸಂಸದರು ಸೂಚನೆ ನೀಡಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಸಿಗಬಹುದಾದ ಪ್ರಯೋಜನ ಮತ್ತು ಅನುಕೂಲಗಳ ಬಗ್ಗೆ ಸರಿಯಾದ ಮಾಹಿತಿಯನ್ನು ರೈತರಿಗೆ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಶಿವಲಿಂಗೇಗೌಡ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ನಮಗೇ ಸರಿಯಾದ ಮಾಹಿತಿ ಇರುವುದಿಲ್ಲ. ಜನಸಾಮಾನ್ಯರಿಗೆ ಹೇಗಿರುತ್ತದೆ, ಇಂದಿನ ಸಭೆಯಲ್ಲಿ ಕೇವಲ ಕೇಂದ್ರದ ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಅನುದಾನ ಬಂದಿದೆ, ಎಷ್ಟು ಖರ್ಚಾಗಿದೆ, ಬಾಕಿ ಎಷ್ಟು ಅನುದಾನ ಬರಬೇಕಾಗಿದೆ, ಎಷ್ಟು ರೈತರಿಗೆ ಅನುಕೂಲವಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.

ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕೇಂದ್ರದಿಂದ ಬಂದಿರುವ ಅನುದಾನದ ಬಗ್ಗೆ ಸಭೆಗೆ ವಿವರಣೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಜಿಪಂ ಸಿಇಒ ಬಿ.ಆರ್ ಪೂರ್ಣಿಮಾ ಹಾಗೂ ಅಧಿಕಾರಿಗಳಿದ್ದರು.

error: Content is protected !!