5.7 C
Munich
Home News Politics ಪಕ್ಷ, ಜಾತಿ, ಧರ್ಮ ಮೀರಿ ಭಾರತೀಯರು ಉಗ್ರಗಾಮಿಗಳ ವಿರುದ್ಧ ಹೋರಾಡಬೇಕು-ಕೇಂದ್ರದ ಭದ್ರತಾ ವೈಫಲ್ಯ ಪ್ರಶ್ನಿಸಿದ ಸಂಸದ...

ಪಕ್ಷ, ಜಾತಿ, ಧರ್ಮ ಮೀರಿ ಭಾರತೀಯರು ಉಗ್ರಗಾಮಿಗಳ ವಿರುದ್ಧ ಹೋರಾಡಬೇಕು-ಕೇಂದ್ರದ ಭದ್ರತಾ ವೈಫಲ್ಯ ಪ್ರಶ್ನಿಸಿದ ಸಂಸದ ಶ್ರೇಯಸ್ ಪಟೇಲ್

ಹಾಸನ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಿಂದೂ ಪ್ರವಾಸಿಗರ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಸಂಸದ ಶ್ರೇಯಸ್‌ ಪಟೇಲ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದಾಳಿಯನ್ನು ಖಂಡಿಸಿರುವ ಅವರು, ಇಡೀ ದೇಶವು ಪಕ್ಷ, ಜಾತಿ, ಧರ್ಮವನ್ನು ಮೀರಿ ಒಗ್ಗಟ್ಟಾಗಿ ಉಗ್ರಗಾಮಿಗಳ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

“ಪಹಲ್ಗಾಮ್‌ ದಾಳಿಯಲ್ಲಿ ಎಲ್ಲೋ ಒಂದು ಕಡೆ ಭದ್ರತಾ ಲೋಪವಾಗಿದೆ. ಆರ್ಟಿಕಲ್ 370 ತೆಗೆದ ನಂತರ ಕೇಂದ್ರ ಸರ್ಕಾರವು ಸೂಕ್ಷ್ಮವಾದ ಭದ್ರತಾ ವ್ಯವಸ್ಥೆಯನ್ನು ಒದಗಿಸಬೇಕಿತ್ತು. ಇಂಟಲಿಜೆನ್ಸ್ ಡಿಪಾರ್ಟ್‌ಮೆಂಟ್ ಏನು ಮಾಡುತ್ತಿತ್ತು? ಈ ದಾಳಿಗೆ ಮುನ್ನ ಮಾಹಿತಿ ಇರಲಿಲ್ಲವೇ? ಏಕೆ ಸೂಕ್ತ ಭದ್ರತೆಯನ್ನು ಕಲ್ಪಿಸಲಿಲ್ಲ? ಇದು ಭದ್ರತಾ ವೈಫಲ್ಯವಾಗಿದ್ದು, ಇದನ್ನು ಕೇಂದ್ರ ಸರ್ಕಾರವೇ ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದೆ,” ಎಂದು ಶ್ರೇಯಸ್‌ ಪಟೇಲ್‌ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಭಾಗವಹಿಸಿದ್ದವು. “ನಾವೆಲ್ಲರೂ ಕೇಂದ್ರ ಸರ್ಕಾರದ ಜೊತೆ ಇದ್ದೇವೆ. ಉಗ್ರಗಾಮಿಗಳನ್ನು ಬಗ್ಗುಬಡಿಯಲು ಸಂಪೂರ್ಣ ಬೆಂಬಲವಿದೆ. ಆದರೆ, ಭದ್ರತಾ ವೈಫಲ್ಯದ ಬಗ್ಗೆ ಗಂಭೀರ ಚಿಂತನೆ ಅಗತ್ಯ,” ಎಂದು ಪಟೇಲ್‌ ಒತ್ತಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯುದ್ಧ ಬೇಡ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೇಯಸ್‌ ಪಟೇಲ್‌, “ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ಆದರೆ, ಜನರು ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಸರ್ಕಾರಕ್ಕೆ ಸದಸ್ಯರ ಬಲವಿದೆ. ಈಗ ಒಗ್ಗಟ್ಟಿನಿಂದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯ,” ಎಂದಿದ್ದಾರೆ.

error: Content is protected !!