ಹಾಸನ : ರಾಗಿ ಖರೀದಿಗೆ ಶಾಸಕ ಸ್ವರೂಪ ಪ್ರಕಾಶ್ ಚಾಲನೆ

ಹಾಸನ : ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ನಗರದ ಎಪಿಎಂಸಿ ಯಲ್ಲಿ ಸ್ಥಾಪಿಸಿರುವ ರಾಗಿ ಖರೀದಿ ಕೇಂದ್ರದಲ್ಲಿ ಇಂದು ಶಾಸಕ ಸ್ವರೂಪ್ ಪ್ರಕಾಶ್, ಖರೀದಿಗೆ ಚಾಲನೆ ನೀಡಿದರು.

ಈ ವೇಳೆ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ರೈತರು ಬೆಳೆದ ಭತ್ತ ಹಾಗೂ ರಾಗಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡಲು ಇಂದು ಖರೀದಿ ಕೇಂದ್ರವನ್ನು ತೆರೆಯಲಾಗಿದೆ, ರಾಗಿ ಪ್ರತೀ ಕ್ವಿಂಟಾಲ್ ಗೆ 4,880 ರೂಪಾಯಿ, ಭತ್ತಕ್ಕೆ 2,360 ರೂಪಾಯಿ ಕನಿಷ್ಠ ಬೆಲೆ ನಿಗದಿ ಮಾಡಿ ಖರೀದಿ ಮಾಡಲಾಗುತ್ತಿದೆ ಎಂದರು

ಹಾಸನ ತಾಲೂಕಿನಲ್ಲಿ 1,220 ಜನ ರೈತರು ನೋಂದಾಯಿಸಿಕೊಂಡಿದ್ದಾರೆ, ಅದರಂತೆ ಇನ್ನುಳಿದ ರೈತರು ಕೂಡ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ತಾವು ಬೆಳೆದ ಭತ್ತ ರಾಗಿ ಬೆಳೆಗಳನ್ನು ಇಲ್ಲಿ ತಂದು ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು.

ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ನೇರವಾಗಿ ಖರೀದಿ ಮಾಡಿ ಸರ್ಕಾರದಿಂದ ನೀಡುತ್ತಿರುವ ಅನ್ನಭಾಗ್ಯ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ ಇದರಿಂದ ರೈತರಿಗೂ ಅನುಕೂಲವಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.