ಹಾಸನ : ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ?

ಹಾಸನ – ಹಾಸನ ಮೂಲದ ಪ್ರಿಯಾಂಕಾ ದಿಢೀರ್ ನಾಪತ್ತೆಯಾಗುತ್ತಿದ್ದಂತೆ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಮನೆಯಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಹೊರಟಿದ್ದ ಆಕೆ, ಮರಳಿ ಮನೆಗೆ ಬಾರದೇ ಇದ್ದುದು ಆತಂಕಕ್ಕೆ ಕಾರಣವಾಯಿತು.

ಕುಟುಂಬದವರು ಕೊಲೆ, ಆತ್ಮಾ*ಚಾರ ಮತ್ತು ದರೋಡೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಪೋಷಕರು ಆರೋಪಿಸಿದ ಹಿನ್ನೆಲೆಯಲ್ಲಿ ಘಟನೆ ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು.

ಕೆರೆಯ ಬಳಿ ವಸ್ತುಗಳು – ಕೊಲೆ ಶಂಕೆ ಗಟ್ಟಿತನ

ಪ್ರಿಯಾಂಕಾಳ ಉಡುಪು, ಚಪ್ಪಲಿ, ವ್ಯಾನಿಟಿ ಬ್ಯಾಗ್ ಸೇರಿದಂತೆ ಕೆಲವು ವಸ್ತುಗಳು ಕೆರೆಯ ಬಳಿ ಪತ್ತೆಯಾಗಿದ್ದವು. ಇದರಿಂದ ಕೊಲೆ ನಡೆದಿರಬಹುದೆಂಬ ಅನುಮಾನ ಗಟ್ಟಿಯಾದುದು. ತಕ್ಷಣವೇ ಮುಳುಗು ತಜ್ಞರನ್ನು ಕರೆಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಪರಿಶೀಲನೆ ನಡೆಸಿದರೆ, ಡ್ರೋನ್ ಸಹಾಯದಿಂದ ಸುತ್ತಮುತ್ತಲಿನ ಪ್ರದೇಶವನ್ನೂ ಪೊಲೀಸರು ಚುರುಕಾಗಿ ತಪಾಸಣೆ ಮಾಡಿದರು. ಆದರೆ ಶವ ಅಥವಾ ಯಾವುದೇ ನಿರ್ಣಾಯಕ ಸುಳಿವು ಸಿಗಲಿಲ್ಲ.

ಪೊಲೀಸರ ಅನುಮಾನಕ್ಕೆ ಕಾರಣವಾದ ಸುಳಿವು

ಆಭರಣಗಳನ್ನು ಹೊರತುಪಡಿಸಿ ಉಳಿದ ವಸ್ತುಗಳು ಮಾತ್ರ ಪತ್ತೆಯಾಗಿರುವುದು ಪೊಲೀಸರ ಗಮನ ಸೆಳೆಯಿತು. ಘಟನಾ ಸ್ಥಳದಲ್ಲಿ ಆರಂಭದಲ್ಲಿ ಕಾಣಿಸದಿದ್ದ ಕೆಲವು ವಸ್ತುಗಳು ನಂತರ ಕಾಣಿಸಿಕೊಂಡಿದ್ದು ಅನುಮಾನ ಹೆಚ್ಚಿಸಿತು. ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಟವರ್ ಲೊಕೇಶನ್ ಪರಿಶೀಲಿಸಿದಾಗ, ಬೇಲೂರು ಬಸ್ ನಿಲ್ದಾಣದ ಬಳಿ ಫೋನ್ ಸ್ವಿಚ್ ಆಫ್ ಆಗಿರುವುದು ಪತ್ತೆಯಾಯಿತು. ಇದರಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿತು.

ಕುಣಿಗಲ್‌ನಲ್ಲಿ ಪತ್ತೆಯಾದ ಪ್ರಿಯಾಂಕಾ

ಟವರ್ ಲೊಕೇಶನ್ ಆಧರಿಸಿ ಪೊಲೀಸರು ಕುಣಿಗಲ್ ಭಾಗದಲ್ಲಿ ಪರಿಶೀಲನೆ ನಡೆಸಿದಾಗ ಪ್ರಿಯಾಂಕಾ ಅಲ್ಲಿ ಇರುವ ಮಾಹಿತಿ ದೃಢಪಟ್ಟಿತು. ಖಚಿತ ಸುಳಿವು ಸಿಕ್ಕ ತಕ್ಷಣವೇ ಪೊಲೀಸರು ದೌಡಾಯಿಸಿ, ಬಿಹಾರಕ್ಕೆ ತೆರಳಲು ಸಿದ್ಧರಾಗಿದ್ದ ಪ್ರಿಯಾಂಕಾ ಹಾಗೂ ಡೇವಿಡ್ ಅವರನ್ನು ವಶಕ್ಕೆ ಪಡೆದರು. ಪ್ರಾಥಮಿಕ ವಿಚಾರಣೆಯಲ್ಲಿ, ಇಬ್ಬರೂ ಒಟ್ಟಿಗೆ ತೆರಳಿ ಹೊಸ ಜೀವನ ಆರಂಭಿಸುವ ಯೋಜನೆ ರೂಪಿಸಿದ್ದರೆಂಬುದು ಬೆಳಕಿಗೆ ಬಂದಿದೆ.

ತನ್ನದೇ ಕಥೆಯಲ್ಲಿ ಸಿಲುಕಿದ ಪ್ರಿಯಾಂಕಾ

ಒಂದು ವೇಳೆ ಪ್ರಿಯಾಂಕಾ ನೇರವಾಗಿ ಡೇವಿಡ್ ಜೊತೆ ತೆರಳಿದ್ದರೆ ಇದು ಪಲಾಯನ ಪ್ರಕರಣವಾಗಿರಬಹುದಿತ್ತು. ಆದರೆ ತನ್ನದೇ ಕೊಲೆ ಮತ್ತು ದರೋಡೆ ನಡೆದಿದೆ ಎಂದು ನಾಟಕವಾಡಿದ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತು. ಇದೀಗ ಪ್ರಿಯಾಂಕಾಳನ್ನು ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಡೇವಿಡ್‌ನಿಂದ ವಿಚಾರಣೆ ಮುಂದುವರಿದಿದೆ. ಪ್ರಕರಣದ ಸಂಪೂರ್ಣ ಹಿನ್ನಲೆ ಹಾಗೂ ಉದ್ದೇಶಗಳ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.