- ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ಕೌಟುಂಬಿಕ ಕಲಹದಿಂದ ಮನನೊಂದ ಸಾಗರ್ (37) ಎಂಬುವವರು ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಆನ್ ಮಾಡಿ ನೇಣಿಗೆ ಶರಣಾಗಿದ್ದಾರೆ. Hassan crime news.
Hassan|ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ನಲ್ಲಿ ಆತ್ಮಹತ್ಯೆಯ ದೃಶ್ಯವನ್ನು ರೆಕಾರ್ಡ್ ಆಗುವಂತೆವಂತೆ ಕ್ಯಾಮರಾ ಆನ್ ಮಾಡಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಸಾಗರ್ (37) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇವರು ಮೂಲತಃ ಹಾಸನ ತಾಲ್ಲೂಕಿನ ಯಲಗುಂದ ಗ್ರಾಮದವರಾಗಿದ್ದು, ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ಸಮಯದಿಂದ ಚನ್ನಪಟ್ಟಣ ಬಡಾವಣೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಕುಟುಂಬದ ಜೊತೆ ವಾಸವಿದ್ದರು.
ಘಟನೆಯ ವಿವರ:
ಪೊಲೀಸ್ ಮೂಲಗಳ ಪ್ರಕಾರ, ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ತೀವ್ರ ಬೇಸತ್ತಿದ್ದ ಸಾಗರ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು ತಮ್ಮ ಮೊಬೈಲ್ ಫೋನ್ನಲ್ಲಿ ರೆಕಾರ್ಡಿಂಗ್ ಆನ್ ಮಾಡಿಟ್ಟು ಈ ಕೃತ್ಯ ಎಸಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಎರಡೂವರೆ ನಿಮಿಷಗಳ ವಿಡಿಯೋದಲ್ಲಿ ಸಾಗರ್, ನೇಣು ಬಿಗಿದುಕೊಂಡು ನೇತು ಬಿದ್ದಾಗಿನಿಂದ ದೇಹ ಪ್ರಾಣ ಕಳೆದುಕೊಂಡು ನಿಸ್ತೇಜಗೊಳ್ಳುವವರೆಗಿನ ದೃಶ್ಯಗಳು ರೆಕಾರ್ಡ್ ಆಗಿವೆ. ಉಸಿರುಗಟ್ಟಿದಾಗಲೂ ಆತ ಕೊಂಚವೂ ಕೊಸರಾಡದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಖಿನ್ನತೆ ಅಥವಾ ಮಾನಸಿಕ ಒತ್ತಡವಿದ್ದರೆ ಸಹಾಯವಾಣಿ: 104, ಅಥವಾ 080-25497777 ಗೆ ಕರೆ ಮಾಡಿ ಆಪ್ತಸಮಾಲೋಚನೆ ಪಡೆಯಿರಿ










