ಹಾಸನ: ಕಾಯಕ ಯೋಗಿನಿ ಕಾಂಚನಮಾಲಾ ಸೇವೆ ಅನನ್ಯ

ಹಾಸನ: ಪರೋಪಕಾರಾರ್ಥಂ ಇದಂ ಶರೀರಂ ಪರೋಪಕಾರಕ್ಕಾಗಿಯೇ ಈ ದೇಹ ಎಂಬ ತತ್ವವನ್ನು ಜೀವನದ ಉಸಿರಾಗಿಸಿಕೊಂಡು ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡವರು ಕಾಂಚನಮಾಲಾ. ಸೇವೆಯೇ ಇವರ  ಧ್ಯೇಯ.

 ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ,ಸ್ವಚ್ಛತಾ ಕಾರ್ಯಗಳು, ಆರೋಗ್ಯ ತಪಾಸಣೆ, ಮಧ್ಯವರ್ಜನ  ಶಿಬಿರಗಳು, ಕೆರೆ, ಕಲ್ಯಾಣಿ ಹೂಳೆತ್ತುವ ಕೆಲಸ, ಪರಿಸರ  ಜಾಗೃತಿ, ಪ್ಲಾಸ್ಟಿಕ್ ನಿರ್ಮೂಲನೆ ಹೀಗೆ ಯಾವ ಸಮಾಜಪರ  ಕಾರ್ಯಕ್ರಮ ನಡೆಯುತ್ತಿದ್ದರೂ, ಅಲ್ಲಿ ಶಿಸ್ತಿನ ಸಿಪಾಯಿಯಂತೆ  ಸ್ಕೌಟ್ಸ್ ಮತ್ತು ಗೈಡ್ಸ್ನ ಕಾಂಚನಮಾಲ ಇದ್ದೇ ಇರುತ್ತಾರೆ  ಎಂಬುದು ಎಲ್ಲರಿಗೂ ತಿಳಿದ ಸಂಗತಿ.

ದೊಡ್ಡ ಕೆಲಸವಾಗಲಿ, ಸಣ್ಣ ಕಾರ್ಯಕ್ರಮವಾಗಲಿ ಯಾವುದಕ್ಕೂ ತಾರತಮ್ಯವಿಲ್ಲದೆ ಶ್ರದ್ಧೆ, ಕಾರ್ಯಕ್ಷಮತೆ  ಮತ್ತು ಶಿಸ್ತಿನಿಂದ ಸೇವೆ ಸಲ್ಲಿಸುವ ಅವರ ನಿಷ್ಠೆಯೇ ಅನೇಕ  ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ.

ಅವರ ನಿಷ್ಕಪಟ ಸೇವಾಭಾವವನ್ನು ನೆನಪಿಸುವ ಒಂದು  ವೈಯಕ್ತಿಕ ಘಟನೆ ಇಲ್ಲಿಗೆ ಸೂಕ್ತ. ಒಮ್ಮೆ ಜಿಲ್ಲಾ ಮಹಿಳಾ  ಸಮಾವೇಶದ ವ್ಯವಸ್ಥೆ ದಿಢೀರನೆ ಸಂಕಷ್ಟಕ್ಕೆ ಸಿಲುಕಿದ  ಸಂದರ್ಭದಲ್ಲಿ, ಕೊನೆಯ ಕ್ಷಣದಲ್ಲಿ ಸ್ಥಳ ನಿರಾಕರಿಸಲ್ಪಟ್ಟಾಗ,  ನಸುಕಿನಲ್ಲೇ ಆಗಮಿಸಿ ಮತ್ತೊಂದು ಸ್ಥಳವನ್ನು  ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸಜ್ಜುಗೊಳಿಸಿ, ನಿಗದಿತ ಸಮಯಕ್ಕೆ  ಕಾರ್ಯಕ್ರಮಆರಂಭವಾಗುವಂತೆ  ಮಾಡಿದ ಏಕೈಕ ಆಪದ್ಬಾಂಧವರು ಕಾಂಚನಮಾಲ.

ಆ ಸಂದರ್ಭದ ಅವರ  ಸಹಕಾರ ಮರೆಯಲಾಗದದ್ದು. ಇದು ಒಬ್ಬರ ಅನುಭವವಷ್ಟೇ ಅಲ್ಲ. ಎಲ್ಲೆಡೆ ಯಾವ ಕೆಲಸ ನಡೆದರೂ, ಅದು ತಮ್ಮದೇ ಕೆಲಸ ಎಂಬಂತೆ ಮುತುವರ್ಜಿ ವಹಿಸಿ  ಕೈಜೋಡಿಸುವುದು ಕಾಂಚನಮಾಲರ ಸ್ವಭಾವ. ಎಷ್ಟು  ಗಿಡಗಳನ್ನು ನೆಟ್ಟಿದ್ದಾರೆ, ಎಷ್ಟು ಗಿಡಗಳನ್ನು ಬೆಳೆಸಿದ್ದಾರೆ, ಎಷ್ಟು ಕಲ್ಯಾಣಿಗಳ ಹೂಳೆತ್ತುವ ಕಾರ್ಯದಲ್ಲಿ ಶ್ರಮದಾನ  ಮಾಡಿದ್ದಾರೆ?ಅದರ ಲೆಕ್ಕ ಅವರಿಗೇ ಗೊತ್ತಿಲ್ಲ.

ಸ್ಕೌಟ್ಸ್ ಮತ್ತು  ಗೈಡ್ಸ್ ಮಕ್ಕಳನ್ನು ಜೊತೆ ಮಾಡಿಕೊಂಡು, ಬುತ್ತಿ  ಕಟ್ಟಿಕೊಂಡು, ಈ ಇಳಿವಯಸ್ಸಿನಲ್ಲೂ ಹಳ್ಳಿಹಳ್ಳಿ ಸುತ್ತಿ ಪರಿಸರ  ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ತಾಯಿ ಮನಸಿನ  ಸೇವಕಿಯಾಗಿ ಅವರು ಅಪರೂಪದಲ್ಲಿ ಅಪರೂಪ.

ಜೀವನ ಪಯಣ:

ಕಾಂಚನಮಾಲ ಅವರು 28-09-1949ರಂದು ಆಲೂರು ತಾಲ್ಲೂಕಿನ ಹಂಜಿಳಿಗೆ ಮಠದಲ್ಲಿ ಜನಿಸಿದರು. ಮಧ್ಯಮ ವರ್ಗದ  ಅವಿಭಕ್ತ ಕುಟುಂಬದ ಗುರುಬಸವಯ್ಯ?ಈರಮ್ಮ ದಂಪತಿಗಳ  ಜ್ಯೇಷ್ಠ ಪುತ್ರಿ. ಪ್ರಾಥಮಿಕ ಶಿಕ್ಷಣ ಕಲ್ಲಾರೆಯಲ್ಲಿ, ಪ್ರೌಢ  ಶಿಕ್ಷಣ ಶೆಟ್ಟಿಹಳ್ಳಿ ರಾಯರಕೊಪ್ಪಲಿನಲ್ಲಿ ಪೂರ್ಣಗೊಳಿಸಿದರು.

ನಂತರ ಹಿಂದಿ ರತ್ನ ಪರೀಕ್ಷೆ, ಮೈಸೂರಿನಲ್ಲಿ ಹಿಂದಿ ಶಿಕ್ಷಕ  ತರಬೇತಿ ಪಡೆದು, ಹಾನುಬಾಳಿನ ಬಾಳ್ಳುಪೇಟೆ ಸಿದ್ದಣ್ಣಯ್ಯ  ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು.  ಅದೇ ಶಾಲೆಯಲ್ಲಿ ಜನಮೆಚ್ಚಿದ ಶಿಕ್ಷಕಿ ಪುರಸ್ಕಾರ ಪಡೆಯುತ್ತ  ನಿವೃತ್ತರಾದರು. ಕುಟುಂಬದ ಹೊಣೆಗಾರಿಕೆಯನ್ನು ಹೊತ್ತು,  ಮೂವರು ತಮ್ಮಂದಿರು ಹಾಗೂ ಒಬ್ಬ ತಂಗಿಯ ಭವಿಷ್ಯ  ರೂಪಿಸುವಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿದ ಅವರು
ಅವಿವಾಹಿತರಾಗಿ ಉಳಿದು, ವೃದ್ಧ ತಾಯಿಯ ಸೇವೆಯನ್ನು  ಕೊನೆಯವರೆಗೂ ನಿರ್ವಹಿಸಿದರು.

ನಿವೃತ್ತಿಯ ನಂತರ  ಸAಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿರುವ ಅವರು ಇಂದು  76ರ ಹರೆಯದಲ್ಲೂ ಅಚಲ ಉತ್ಸಾಹದೊಂದಿಗೆ  ಕಾರ್ಯನಿರತರಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಪ್ರಿ.ಎ.ಎಲ್.ಟಿ  ತರಬೇತಿ ಪಡೆದು ಹಾಸನದಲ್ಲಿ ಆಯುಕ್ತರಾಗಿ, ನಂತರ ಡಿಸ್ಟಿçಕ್ಟ್  ಟ್ರೆöÊನಿಂಗ್ ಕಮಿಷನರ್ ಹಾಗೂ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ  ರಾಜ್ಯ ಮತ್ತು ಹೊರರಾಜ್ಯಗಳಲ್ಲಿಯೂ ಅಪೂರ್ವ ಸೇವೆ  ಸಲ್ಲಿಸಿದ್ದಾರೆ. ಪ್ರಸ್ತುತ ಸೀನಿಯರ್ ಗೈಡ್ ಆಗಿ ಸೇವೆ  ಮುಂದುವರಿಸುತ್ತಿದ್ದಾರೆ.

ಪ್ರಶಸ್ತಿಗಳು:

ಅವರ ಅನನ್ಯ ಸೇವೆಗೆ ದೊರೆತ ಪ್ರಮುಖ ಗೌರವಗಳು:  ಸ್ಕೌಟ್ಸ್ ಮತ್ತು ಗೈಡ್ಸ್ ಏಶಿಯಾ ಪೆಸಿಫಿಕ್ ಅವಾರ್ಡ್, ಶಿಕ್ಷಣ ಇಲಾಖೆಯಿಂದ  ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಹಾಸನ ಸರ್ಕಾರಿ ಕಲಾ ಕಾಲೇಜಿನ ವಿಶಿಷ್ಟ  ವ್ಯಕ್ತಿ ಪುರಸ್ಕಾರ, ಯುನೈಟೆಡ್ ಅಕಾಡೆಮಿಯ ಕರ್ಮಯೋಗಿ  ಪ್ರಶಸ್ತಿ, ರೋಟರಿ ಹಾಗೂ ಲಯನ್ಸ್ ಸಂಸ್ಥೆಗಳ ಸೇವಾರತ್ನ  ಪ್ರಶಸ್ತಿ  ಇನ್ನೂ ಅನೇಕ ಸನ್ಮಾನಗಳು ದೊರಕಿದೆ.

ಅಜಾತಶತ್ರುವಾಗಿಯೂ, ಆದರ್ಶ ಮಹಿಳೆಯಾಗಿಯೂ  ಗುರುತಿಸಿಕೊಂಡಿರುವ ಕಾಂಚನಮಾಲ ಅವರು ಹೆಣ್ಣುಸಂಕುಲಕ್ಕೆ  ನಿಜವಾದ ಮಾದರಿ. ಅವರ ಆಯುಷ್ಯ, ಆರೋಗ್ಯ ವೃದ್ಧಿಸಿ ಮುಂದಿನ  ಪೀಳಿಗೆಗೆ ಇನ್ನಷ್ಟು ಪ್ರೇರಣೆಯಾಗಲಿ ಎಂದು ಹಾರೈಸೋಣ.