ಹಾಸನ: ಕನ್ನಡನಾಡಿನ ಹೆಮ್ಮೆಯ ಪರಿಸರ ತಾಯಿ, ಪದ್ಮಶ್ರೀ ಪುರಸ್ಕೃತೆ ಮತ್ತು ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ನಿಧನ ಹಿನ್ನೆಲೆ, ನಗರದ ಸ್ಕಾಲರ್ಸ್ ಶಾಲೆಯ ಆವರಣದಲ್ಲಿಂದು ಭಾವಪೂರ್ಣ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಶಾಲಾ ಆವರಣದಲ್ಲೇ ಸಸಿ ನೆಡುವ ಮೂಲಕ ಅವರಿಗೆ ಗೌರವ ಸಮರ್ಪಿಸಿದರು.

ಪರಿಸರಕ್ಕಾಗಿ ತಮ್ಮ ಜೀವಮಾನವನ್ನೇ ಅರ್ಪಿಸಿದ ತಿಮ್ಮಕ್ಕ ಅವರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯಿಂದ ಈ ವಿಶಿಷ್ಟ ರೀತಿಯ ನಮನ ವ್ಯಕ್ತವಾಯಿತು.
ತಿಮ್ಮಕ್ಕ ಅವರ ಪರಿಸರ ಸೇವೆ, 450ಕ್ಕೂ ಹೆಚ್ಚು ಸಾಲುಮರಗಳನ್ನು ನೆಟ್ಟು ಮಕ್ಕಳಂತೆ ಸಾಕಿದ ಕರುಣೆ, ಸರಳತೆ ಮತ್ತು ಮಾನವಕುಲದ ಮೇಲಿನ ಪ್ರೀತಿ ಎಂದಿಗೂ ಅಳಿಸಿಹೋಗದ ಮುದ್ರೆಯಾಗಿವೆ. ಇಂತಹ ಮಹಾನ್ ಪರಿಸರ ಹೋರಾಟಗಾರ್ತಿ 14 ವರ್ಷಗಳ ಹಿಂದೆ ಸ್ಕಾಲರ್ಸ್ ಶಾಲೆಯ ಸಂಭ್ರಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಆಗಲೂ ವಿದ್ಯಾರ್ಥಿಗಳ ಜೊತೆಗೇ ಗಿಡ ನೆಟ್ಟು ಪ್ರಕೃತಿ ಪ್ರೇಮದ ಮಹತ್ವವನ್ನು ಬೋಧಿಸಿದ್ದರು ಎಂದು ಶಾಲೆಯ ಆಡಳಿತಾಧಿಕಾರಿ ಡಾ.ಎಚ್.ಎನ್.ಚಂದ್ರಶೇಖರ್ ಸ್ಮರಿಸಿದರು.

ಇಂದು, ಅವರ 114 ವರ್ಷದ ಸಾರ್ಥಕ ಜೀವನಯಾತ್ರೆಗೆ ಶ್ರದ್ಧಾಂಜಲಿ ಸಲ್ಲಿಸಲು ನಡೆದ ಈ ಗಿಡ ನೆಡುವ ಕಾರ್ಯಕ್ರಮದಲ್ಲಿ “ಅವರಿಗೆ ಚಿರಶಾಂತಿ ಲಭಿಸಲಿ” ಎಂದು ಪ್ರಾರ್ಥಿಸಿದ್ದೇವೆ ಎಂದು ಅವರು ಹೇಳಿದರು.
ಸ್ಕೌಟ್ಸ್ ನಾಯಕ ಗಿರೀಶ್, ಶಿಕ್ಷಕಿ ಕಾಂಚನಮಾಲ ಹಾಗೂ ಶಾಲೆಯ ಬೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.










