ಹಾಸನ: ರಾಜ್ಯ ಗೊಲ್ಲ (ಯಾದವ) ಸಂಘದ ರಾಜ್ಯಾಧ್ಯಕ್ಷ ಹಾಗೂ ಶಿಕ್ಷಣ ಕ್ಷೇತ್ರದ ಎಂಎಲ್ಸಿ ಡಿ.ಟಿ ಶ್ರೀನಿವಾಸ್ ಅವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಹಾಸನ ಜಿಲ್ಲಾ ಗೊಲ್ಲ (ಯಾದವ) ಸಂಘದ ಉಪಾಧ್ಯಕ್ಷ ಹೊನ್ನೇಗೌಡ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಯಾದವ (ಗೊಲ್ಲ) ಸಮುದಾಯ ಸುಮಾರು 19 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದೆ. ಆದರೂ ರಾಜಕೀಯವಾಗಿ ಪ್ರಾತಿನಿಧ್ಯ ಇಲ್ಲದಂತಾಗಿದೆ.
ನಾಡಿನ ಯಾದವ ಸಮುದಾಯದ ಧೀಮಂತ ನಾಯಕ ದಿ.ಎ.ಕೃಷ್ಣಪ್ಪ ಅವರ ನಂತರ ರಾಜ್ಯ ಗೊಲ್ಲ (ಯಾದವ) ಸಂಘದ ನೇತೃತ್ವವನ್ನು ಡಿ.ಟಿ.ಶ್ರೀನಿವಾಸ್ ಅವರು ವಹಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ.
ಡಿ.ಟಿ. ಶ್ರೀನಿವಾಸ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅವರ ನೇತೃತ್ವದಲ್ಲಿ ತುಮಕೂರು, ಚಿತ್ರದುರ್ಗ, ಚಿಕ್ಕೋಡಿಗಳಲ್ಲಿ ರಾಜ್ಯ ಗೊಲ್ಲ ಸಮಾವೇಶ ಮಾಡಿ ಸಮಾಜ ಸಂಘಟನೆ ಮಾಡಿದ್ದಾರೆ.
2024ರಲ್ಲಿ ನಡೆದ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಎಂ.ಎಲ್.ಸಿ ಚುನಾವಣೆಯಲ್ಲಿ ಇದುವರೆವಿಗೂ ಕಾಂಗ್ರೆಸ್ ಜಯಸಾಧಿಸಿರಲಿಲ್ಲ. ಇವರು ಮೊದಲ ಬಾರಿಗೆ ಕಾಂಗ್ರೆಸ್ ಗೆಲ್ಲಿಸಿದರು.
ಡಿ.ಟಿ ಶ್ರೀನಿವಾಸ್ ಅವರು ಡಾಕ್ಟರೇಟ್ ಸೇರಿ ಹಲವು ಪದವಿ ಪಡೆದು ಶಿಕ್ಷಣ ತಜ್ಞರಾಗಿದ್ದಾರೆ. ಅನೇಕ ಚುನಾವಣೆಗಳಲ್ಲಿ ತಮ್ಮ ಚಾಣಾಕ್ಷ ತಂತ್ರಗಳಿಂದ ಯಶಸ್ಸು ಸಾಧಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಹಿಂದುಳಿದ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿ ಸುಮಾರು 95ಕ್ಕೂ ಹೆಚ್ಚು ಅತೀ ಹಿಂದುಳಿದ ಸಮಾಜ ಸಂಘಟಿಸಿ ಅವರನ್ನು ಮುನ್ನೆಲೆಗೆ ತರಲು ಶ್ರಮಿಸುತ್ತಿದ್ದಾರೆ ಅಂತಹವರನ್ನು ಕಾಂಗ್ರೆಸ್ ಸರ್ಕಾರ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಈ ಹಿಂದಿನಿಂದಲೂ ಗೊಲ್ಲ ಸಮುದಾಯವನ್ನು
ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸಿದ್ದು, ಕಾಂಗ್ರೆಸ್ ಸರ್ಕಾರವಾದರೂ ಶ್ರೀನಿವಾಸ್ ಅವರ ಸಂಘಟನೆ, ಪಕ್ಷ ನಿಷ್ಠೆ ಹಾಗೂ ಹೋರಾಟ ಪರಿಗಣಿಸಿ ಡಿ.ಟಿ.ಶ್ರೀನಿವಾಸ ಅವರನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿಂದುಳಿದ ಸಮಾಜಗಳ ಪ್ರತಿನಿಧಿಯಾಗಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೃಷ್ಣಪ್ಪ, ಗೋವಿಂದರಾಜು, ಕೇಶವೇಗೌಡ, ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.










