ಹಾಸನ: ಭೂ ಪರಿಹಾರ ವಿಳಂಬ ಹಿನ್ನೆಲೆ: ಜಿಲ್ಲಾಧಿಕಾರಿ ಸರ್ಕಾರಿ ವಾಹನ ಜಪ್ತಿ- ಟೋಯಿಂಗ್ ವಾಹನ ತಂದು ಎಳೆದೊಯ್ದರು!

ಹಾಸನ: ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನೀಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಹಾಸನ ಜಿಲ್ಲಾಧಿಕಾರಿ ಸರ್ಕಾರಿ ವಾಹನವನ್ನು ವಕೀಲ ಮಂಜುನಾಥ್ ಅವರು ಜಪ್ತಿ ಮಾಡಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ವಕೀಲ ಮಂಜುನಾಥ್ ಅವರು ರೈತ ಮರೀಗೌಡ ಅವರ ಮಕ್ಕಳೊಂದಿಗೆ ಆಗಮಿಸಿ, ಜಿಲ್ಲಾಧಿಕಾರಿಯವರ KA-13-GA-0003 ಸಂಖ್ಯೆಯ ಇನ್ನೋವಾ ಸರ್ಕಾರಿ ಕಾರನ್ನು ಜಪ್ತಿ ಮಾಡಿ ಟೋಯಿಂಗ್ ವಾಹನದ ಮೂಲಕ ಎಳೆದೊಯ್ದಿದ್ದಾರೆ. ನಂತರ ಜಿಲ್ಲಾ ನ್ಯಾಯಾಲಯದ ಕೆಳ ಮಹಡಿಯಲ್ಲಿ ಜಿಲ್ಲಾಧಿಕಾರಿಯವರ ವಾಹನವನ್ನು ನಿಲ್ಲಿಸಲಾಗಿದೆ.

ಮಧ್ಯಾಹ್ನ ಕಾರು ಜಪ್ತಿಗೆ ಮುಂದಾದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ (ಎಸಿ) ಅವರು, ಸಮಯ ನೀಡುವಂತೆ ಹಾಗೂ ಪರಿಹಾರದ ಹಣವನ್ನು ಶೀಘ್ರದಲ್ಲೇ ನೀಡುವುದಾಗಿ ಮನವಿ ಮಾಡುವ ಮೂಲಕ ವಕೀಲರನ್ನು ಮನವೊಲಿಸಲು ಯತ್ನಿಸಿದರು. ಬಳಿಕ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಸ್ವತಃ ವಕೀಲ ಮಂಜುನಾಥ್ ಅವರಿಗೆ ಕರೆ ಮಾಡಿ, ಸಂಜೆಯೊಳಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಆದರೆ ರಾತ್ರಿಯಾದರೂ ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಯವರ ಕಾರನ್ನು ಅಧಿಕೃತವಾಗಿ ಜಪ್ತಿ ಮಾಡಲಾಗಿದೆ.

ಗಮನಾರ್ಹವಾಗಿ, ಇದೇ ವಕೀಲ ಮಂಜುನಾಥ್ ಅವರು ಸುಮಾರು ಹದಿನೈದು ದಿನಗಳ ಹಿಂದೆ ಮತ್ತೊಂದು ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ವಿಳಂಬವಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಅವರ ಸರ್ಕಾರಿ ಕಾರನ್ನೂ ಜಪ್ತಿ ಮಾಡಿದ್ದರು. ಪ್ರಸ್ತುತ ಜಿಲ್ಲಾ ನ್ಯಾಯಾಲಯದ ಕೆಳ ಮಹಡಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರ ಎರಡೂ ಸರ್ಕಾರಿ ವಾಹನಗಳು ನಿಲ್ಲಿಸಲ್ಪಟ್ಟಿವೆ.