ಕನ್ನಡ ಪೋಸ್ಟ್ ನ್ಯೂಸ್ ನೆಟ್ವರ್ಕ್
ಹಾಸನ: ನಗರದ ಸ್ಕಾಲರ್ಸ್ ಶಾಲೆಯಲ್ಲಿ ಇಂದು ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್ ಮಾತನಾಡಿ, ವಿಶ್ವದ ಶ್ರೇಷ್ಠ ಸಂವಿಧಾನ ಎನಿಸಿಕೊಂಡಿರುವ ಭಾರತ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದೆ. ಬಡವ-ಶ್ರೀಮಂತ, ಮೇಲು-ಕೀಳು, ಮಹಿಳಾ ಅಸಮಾನತೆಯನ್ನು ತೊಡೆದು ಹಾಕಿದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ದೇಶದ ಪ್ರತಿಯೊಬ್ಬರು ಸ್ವಾತಂತ್ರ್ಯವನ್ನು ಅನುಭವಿಸುವಂತಾಗಿದೆ ಎಂದರು. ಶಾಲೆಯ ವಿದ್ಯಾರ್ಥಿನಿ ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಗಿರುವ ಮೌಲ್ಯಗಳು, ಆದರ್ಶಗಳನ್ನು ಒತ್ತಿ ಹೇಳುತ್ತಾ ಈ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂವಿಧಾನ ದಿನಾಚರಣೆಯ ಪ್ರಮಾಣ ವಚನ ಸ್ವೀಕರಿಸಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ತಮ ಬದ್ಧತೆಯನ್ನು ಪುನರುಚ್ಛರಿಸಿದರು.
ಸಂವಿಧಾನದ ಮನೋಭಾವವನ್ನು ಎತ್ತಿ ಹಿಡಿಯುವ ಜವಾಬ್ದಾರಿಯುತ ಮತ್ತು ಜ್ಞಾನವಂತ ನಾಗರಿಕರಾಗಲು ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿತು.
ಶಾಲೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್, ಬೋಧಕ ಹಾಗು ಬೋಧಕೇತರ ಸಿಬ್ಬಂದಿ ಇದ್ದರು.










