ಹಾಸನ ,ಫೆಬ್ರವರಿ,24,2026(www.kannadapost.com): ನಗರದ ಚಿಕ್ಕನಾಳು ಏರಿಯಾದ ಕನ್ನಡ ಹಾಗೂ ಉರ್ದು ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು KPS-ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ವಿಲೀನ ಮಾಡಿ ಮುಚ್ಚಲು ಹೊರಟಿರುವ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು. ಹೋರಾಟಕ್ಕೆ AIDSO ನೇತೃತ್ವ ನೀಡಿತು.
“ಶಾಲೆ ಉಳಿದರೆ ಮಾತ್ರ ಮಕ್ಕಳಿಗೆ ಶಿಕ್ಷಣ”
ಪ್ರತಿಭಟನೆಯಲ್ಲಿ ಮಾತನಾಡಿದ AIDSO ರಾಜ್ಯ ಖಜಾಂಚಿ ಸುಭಾಷ್ ಅವರು, ಸರ್ಕಾರ ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಮಾಡುತ್ತೇವೆ ಎಂದು ಹೇಳಿ, 40,000 ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಚಿಕ್ಕನಾಳು ಏರಿಯಾದಲ್ಲಿ 30 ಕ್ಕಿಂತ ಹೆಚ್ಚು ಮಕ್ಕಳು ಈ ಕನ್ನಡ ಮತ್ತು ಉರ್ದು ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳು ಉಳಿದರೆ ಮಾತ್ರ ಅವರಿಗೆ ಶಿಕ್ಷಣ ಸಿಗುತ್ತದೆ. ಆದರೆ ಸರ್ಕಾರ ಈ ಶಾಲೆಗಳನ್ನು ಮುಚ್ಚಿ ನಗರದ ಚಿಪ್ಪಿನಕಟ್ಟೆಯಲ್ಲಿರುವ ಪ್ರೌಢಶಾಲೆಗೆ ಮಕ್ಕಳು ತೆರಳಬೇಕು ಎಂದು ಆದೇಶ ಹೊರಡಿಸಿರುವುದು ಖಂಡನೀಯ ಎಂದರು.
“ಬಡವರ ಮಕ್ಕಳಿಂದ ಶಿಕ್ಷಣ ಕಸಿಯುವ ಹುನ್ನಾರ”
ಸರ್ಕಾರ ವ್ಯವಸ್ಥಿತವಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಕಾರ್ಮಿಕರ ಮಕ್ಕಳಿಗೆ ಶಿಕ್ಷಣದಿಂದ ವಂಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಶಿಕ್ಷಣ ಸಚಿವರು ಸದನದಲ್ಲಿ “ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ” ಎಂದು ಹೇಳಿ, ಹಿಂಬಾಗಿಲಿನಿಂದ ಆದೇಶ ಹೊರಡಿಸುವುದು ಸರಿಯಲ್ಲ ಎಂದರು.
ಕಳೆದ ಎಂಟು ವರ್ಷಗಳಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಟೀಕಿಸಿದರು.
ಸರ್ಕಾರಿ ಶಾಲೆಗಳ ಸ್ಥಿತಿ ಗಂಭೀರ
60,000 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ
21,000 ಕ್ಕೂ ಹೆಚ್ಚು ಕೊಠಡಿಗಳು ದುರಸ್ತಿ ಆಗಿಲ್ಲ
ಮೂಲಸೌಕರ್ಯಗಳ ಕೊರತೆ
ಈ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು, ಶಾಲೆ ಮುಚ್ಚುವಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪೋಷಕರ ಆಕ್ರೋಶ
ಪೋಷಕರಾದ ಸಲ್ಮಾ ಬಾನು ಮಾತನಾಡಿ, ಚಿಕ್ಕನಾಳು ಪ್ರದೇಶದಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಕಾರ್ಮಿಕರು ವಾಸವಾಗಿದ್ದಾರೆ. ಅವರ ಮಕ್ಕಳಿಗೆ ಸಮೀಪದ ಸರ್ಕಾರಿ ಶಾಲೆಯೇ ಆಧಾರ. “ನಾವು ಸಹ ಇದೇ ಶಾಲೆಯಲ್ಲಿ ಓದಿ ಬೆಳೆದವರು. ಯಾವುದೇ ಕಾರಣಕ್ಕೂ ಈ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ” ಎಂದು ಎಚ್ಚರಿಸಿದರು.
ಸಮಿತಿ ರಚನೆ
ಚಿಕ್ಕನಾಳು ಕನ್ನಡ ಹಾಗೂ ಉರ್ದು ಸರ್ಕಾರಿ ಶಾಲೆ ಉಳಿಸಲು ಏರಿಯಾದ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಚೈತ್ರ, ಉಪಾಧ್ಯಕ್ಷ ಅಭಿಷೇಕ್, ಪೋಷಕರಾದ ಆಯಿಷಾ, ಅಮೀರ ಬಾನು, ಫಾತಿಮಾ ಜಹಾರ, ಸಮೀನಾ, ಜಮೀರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.










