Hassan: ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ದಂಪತಿ‌-ಮನೆ ಮಾಲೀಕನನ್ನೇ ಬಡಿದು ಸೀಮೆಎಣ್ಣೆ ಸುರಿದರು!-ಚಿನ್ನಾಭರಣ ದೋಚಿದರು!

  • ಹಾಸನ ತಾಲೂಕಿನ ಚಿಕ್ಕಗದ್ದವಳ್ಳಿಯಲ್ಲಿ ಗೃಹಪ್ರವೇಶ ಮುಗಿದ ಬೆನ್ನಲ್ಲೇ ಮಾಲೀಕ ಲೋಕೇಶ್ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ರಾಜಯ್ಯ-ಗಂಗಮ್ಮ ದಂಪತಿ ಪರಾರಿಯಾಗಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ.

Hassan|ಹಾಸನ: ತಾಲ್ಲೂಕಿನ ಚಿಕ್ಕಗದ್ದವಳ್ಳಿ ಗ್ರಾಮದಲ್ಲಿ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಹೊಸ ಮನೆಯ ಗೃಹಪ್ರವೇಶ ಮುಗಿಸಿದ ಸಂಭ್ರಮದಲ್ಲಿದ್ದ ಕುಟುಂಬವೊಂದರ ಮೇಲೆ ಅದೇ ಗ್ರಾಮದ ದಂಪತಿಗಳು ಮಾರಣಾಂತಿಕ ಹಲ್ಲೆ ನಡೆಸಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

​ಘಟನೆಯ ವಿವರ:

​ಗ್ರಾಮದ ನಿವಾಸಿ ಲೋಕೇಶ್ ಎಂಬುವವರು ಕಳೆದ ಏಪ್ರಿಲ್ 24ರಂದು ಅದ್ಧೂರಿಯಾಗಿ ಹೊಸ ಮನೆಯ ಗೃಹಪ್ರವೇಶ ನೆರವೇರಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಹೊಸ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಹಳೇ ಮನೆಗೆ ಬೀಗ ಹಾಕಿ ಪಕ್ಕದಲ್ಲೇ ಇದ್ದ ಹೊಸ ಮನೆಗೆ ತೆರಳಿದ್ದರು.

​ರಾತ್ರಿ ಊಟ ಮುಗಿದ ಬಳಿಕ ಲೋಕೇಶ್ ಅವರು ಎಂದಿನಂತೆ ಹಳೇ ಮನೆಗೆ ವಾಪಸ್ಸಾದಾಗ, ಮನೆಯ ಬೀಗ ಮುರಿದಿರುವುದು ಕಂಡುಬಂದಿದೆ. ಆತಂಕದಿಂದ ಒಳಗೆ ಹೋಗಿ ನೋಡಿದಾಗ ಅದೇ ಗ್ರಾಮದ ರಾಜಯ್ಯ ಮತ್ತು ಗಂಗಮ್ಮ ಎಂಬ ದಂಪತಿಗಳು ಕಳ್ಳತನದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

​ಕೊಲೆಗೆ ಯತ್ನಿಸಿ ಪರಾರಿಯಾದ ‘ಚೋರ್’ ದಂಪತಿ:

​”ಇಲ್ಲೇನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ ಮಾಲೀಕ ಲೋಕೇಶ್ ಮೇಲೆ ದಂಪತಿಗಳು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಲೋಕೇಶ್ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಮೈಮೇಲೆ ಸೀಮೆಎಣ್ಣೆ ಸುರಿದು ಜೀವಂತ ದಹನ ಮಾಡಲು ಯತ್ನಿಸಿದ್ದಾರೆ.

​ಅಷ್ಟರಲ್ಲಿ ಲೋಕೇಶ್ ಅವರ ಪತ್ನಿ ಸ್ಥಳಕ್ಕೆ ಆಗಮಿಸಿದ್ದರಿಂದ ಗಾಬರಿಗೊಂಡ ದಂಪತಿಗಳು, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

​ಆಸ್ಪತ್ರೆಗೆ ದಾಖಲು – ಪೊಲೀಸ್ ತನಿಖೆ:

​ತೀವ್ರವಾಗಿ ಗಾಯಗೊಂಡಿರುವ ಲೋಕೇಶ್ ಅವರನ್ನು ತಕ್ಷಣವೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆರೋಪಿ ದಂಪತಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.