ಹಾಸನ: ನಗರದಲ್ಲಿ ಏಕತಾ ನಡಿಗೆ ಯಶಸ್ವಿ ಸರ್ದಾರ್ ಅವರ ಆದರ್ಶ ಮೈಗೂಡಿಸಿಕೊಳ್ಳಲು ಶಾಸಕ-ಜಿಲ್ಲಾಧಿಕಾರಿ ಕರೆ

ಹಾಸನ: ದೇಶಕ್ಕೆ ಉತ್ತಮ ಸಂದೇಶ ನೀಡಿದ ಮುಂಚೂಣಿ ನಾಯಕ, ಮುಂದಿನ ಪೀಳಿಗೆಗೆ ನಾಂದಿ ಹಾಡಿದವರು, ಯುವಕರಿಗೆ ಸ್ಫ್ಪೂರ್ತಿದಾಯಕರಾದ ಮಹಾನ್ ವ್ಯಕ್ತಿತ್ವ ಸರ್ದಾರ್ ವಲ್ಲಭಭಾಯ್ ಪಟೇಲ್ ಎಂದು ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಬಣ್ಣಿಸಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಘಟಕ, ವಿಶ್ವವಿದ್ಯಾಲಯ, ಸ್ಕೌಟ್ ಅಂಡ್ ಗೈಡ್ಸ್, ಎನ್.ಸಿ.ಸಿ. ಹಾಗೂ ಯುವಕ ಸಂಘ ಮತ್ತು ಯುವತಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ೧೫೦ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಯೂನಿಟಿ ಮಾರ್ಚ್ ಜಿಲ್ಲಾ ಮಟ್ಟದ ಪಾದಯಾತ್ರೆಗೆ ಧ್ವಜಾ ಪ್ರದರ್ಶನ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪಟೇಲ್ ಅವರ ೧೫೦ನೇ ಹುಟ್ಟುಹಬ್ಬವನ್ನು ದೇಶಾದ್ಯಂತ ಏಕತಾ ನಡಿಗೆ ಎಂದು ಆಚರಿಸಲಾಗುತ್ತಿದೆ. ಈ ಮಹತ್ತರ ಕಾರ್ಯಕ್ರಮ ರೂಪಿಸಿ ದೇಶದ ಮಟ್ಟಕ್ಕೆ ಕೊಂಡೊಯ್ದ ಪ್ರಧಾನ  ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಬೇಕು ಎಂದು ಹೇಳಿದರು.
ಹಾಸನ ಜಿಲ್ಲೆಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಹೊಯ್ಸಳರ ಆಡಳಿತ, ಬೇಲೂರು-ಶ್ರವಣಬೆಳಗೊಳದಂತಹ ಐತಿಹಾಸಿಕ ಕೇಂದ್ರಗಳು, ಸಾವಿರಾರು ವರ್ಷಗಳ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಪರಂಪರೆ ಇವೆಲ್ಲವೂ ಹಾಸನದ ಗುರುತು. ಏಕತಾ ನಡಿಗೆ ಎಂದರೆ ರಾಷ್ಟ್ರಕ್ಕಾಗಿ ಒಟ್ಟಾಗಿ ನಡೆಯುವ ಸಂಕೇತ. ನಮ್ಮ ಸಮಾಜಮುಖಿ ದೃಷ್ಟಿಯ ಪ್ರತಿರೂಪ. ಈ ನಡಿಗೆ ದೇಶದ ಏಕತೆ ಮತ್ತು ಬಲವನ್ನು ವಿಶ್ವಕ್ಕೆ ತೋರಿಸುವ ಉದಾಹರಣೆ ಎಂದರು.
ಏಕತಾ ನಡಿಗೆ ಎಂದು ದೇಶಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ರೂವಾರಿ ದೇಶದ ಪ್ರಧಾನಿ ದೇಶಕ್ಕೆ ದುಡಿದ ಮಹಾನ್ ನಾಯಕರನ್ನು ಅದರಲ್ಲೂ ವಿಶೇಷವಾಗಿ ಸರ್ದಾರ್ ವಲ್ಲಬಾಯಿ ಪಟೇಲ್ ಅವರನ್ನು ಭಾರತದ ವಕೀಲರಾಗಿ ನ್ಯಾಯವನ್ನು ಕೊಟ್ಟವರು. ಪ್ರಧಾನಿಯಾಗಿ, ಗೃಹ ಸಚಿವರಾಗಿ ಈ ದೇಶಕ್ಕೆ ಸಂದೇಶ ಕೊಟ್ಟವರು. ಮುಂದಿನ ಪೀಳಿಗೆಗೆ ಒಂದು ನಾಂದಿ ಬರೆದಂತಹ ಮಹಾನ್ ನಾಯಕ ಪಟೇಲ್ ಅವರು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಸರ್ದಾರ್ ಪಟೇಲ್ ಏಕೆ ಉಕ್ಕಿನ ಮನುಷ್ಯರು ಎಂಬುದು ಅವರ ಕೃತಿಗಳಲ್ಲಿ ಸ್ಪಷ್ಟ. ೫೬೦ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಂದೇ ಭಾರತದಲ್ಲಿ ಒಂದಾಗಿಸಿ ಸಮಗ್ರ ರಾಷ್ಟ್ರದ ನಿರ್ಮಾಣ ಮಾಡಿದವರು, ಇಂದು ಭಾರತವೆಂಬ ಬಲಿಷ್ಠ, ಏಕೀಕೃತ ರಾಷ್ಟ್ರವನ್ನು ನಾವು ಹೆಮ್ಮೆಯಿಂದ ನೋಡುತ್ತಿದ್ದರೆ, ಅದರ ಮೂಲದಲ್ಲಿ ಪಟೇಲ್ ಅವರ ದೃಢ ನಾಯಕತ್ವವಿದೆ ಎಂದು ನೆನಪಿಸಿದರು.
ಯುವಕರು ಪಟೇಲ್ ಅವರ ಗುಣಗಳನ್ನು, ಶಿಸ್ತು, ದೃಢತೆ ಮತ್ತು ನಾಯಕತ್ವ ಮೈಗೂಡಿಸಿಕೊಳ್ಳಬೇಕು. ದೇಶದ ಪ್ರತಿಯೊಬ್ಬರೂ ಅವರಿಗೆ ಚಿರಋಣಿಗಳು ಹೇಳಿದರು.
ಒಬ್ಬ ಬಲಿಷ್ಠ ನಾಯಕ. ನಾಯಕತ್ವ ಎಂದರೇನು, ನಾಯಕತ್ವದ ಗುಣ ಎಂದರೇನು ಎಂಬುದನ್ನು ತೋರಿಸಿಕೊಟ್ಟವರು. ನಮ್ಮ ಮಕ್ಕಳು ಅದರಲ್ಲೂ ಯುವ ಜನತೆ ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ದೇಶವನ್ನು ಕಟ್ಟಿ ಬಲಿಷ್ಠ ಮಾಡಿದ್ದಾರೆ. ಇಂದಿನ ಮಕ್ಕಳು ಅವರ ಆದರ್ಶ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಎಎಸ್ಪಿ ಕೆ.ಎಂ. ತಮ್ಮಯ್ಯ, ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನಂದ್ ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಕಲಾವಿದ ಬಿ.ಟಿ. ಇತರರಿದ್ದರು. ಲಕ್ಷ್ಮೀನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.