ಹಾಸನ: ಸರ್ಕಾರಿ ಶಾಲಾ ಕೊಠಡಿಗಳಿಗೆ ಅಕ್ರಮ ಬಾಡಿಗೆ ಮುಖ್ಯೋಪಾಧ್ಯಾಯ ಕರಿಬಸಪ್ಪ ವಿರುದ್ಧ ಕ್ರಮಕ್ಕೆ ವಕೀಲ ಜಯಣ್ಣ ಆಗ್ರಹ

ಹಾಸನ: ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕುಸಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಶಾಲೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕಾದ ಮುಖ್ಯೋಪಾಧ್ಯಾಯರೊಬ್ಬರು ಹಣದ ಲಾಭಕ್ಕಾಗಿ ಶಾಲೆಯ ಕೊಠಡಿಗಳನ್ನೇ ಬಾಡಿಗೆಗೆ ನೀಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ಬೇಲೂರು ತಾಲ್ಲೂಕಿನ ಮದಘಟ್ಟ ಸಮೀಪದ ತಾರಿಮರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯ ಕರಿಬಸಪ್ಪ ಅವರು, ಶಾಲಾ ಕೊಠಡಿಗಳನ್ನು ಅಕ್ರಮವಾಗಿ ಬಾಡಿಗೆಗೆ ನೀಡಿ ಕಾನೂನು ಉಲ್ಲಂಘನೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ವಿವರ

ತಾರಿಮರ ಸರ್ಕಾರಿ ಪ್ರೌಢಶಾಲೆ ಮದಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ್ದು, ನೂರಾರು ವಿದ್ಯಾರ್ಥಿಗಳು ಇಲ್ಲಿ ಪ್ರತಿದಿನ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಾರೆ. ಈ ಶಾಲೆಯ ಕೊಠಡಿಗಳನ್ನು ಚಂದನಹಳ್ಳಿಯಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಬಳ್ಳಾರಿಯಿಂದ ಬಂದಿರುವ ಸುಮಾರು 9 ಮಂದಿ ಕಾರ್ಮಿಕರಿಗೆ, ಪ್ರತಿ ನಾಲ್ಕು ದಿನಕ್ಕೆ 10 ಸಾವಿರ ರೂ. ಬಾಡಿಗೆಯಲ್ಲಿ ನೀಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪ್ರಕರಣ ಜ. 20 ರಂದು ಬೆಳಕಿಗೆ ಬಂದಿದೆ.

ಶಾಲಾ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ಧೂಮಪಾನ ಮತ್ತು ಮದ್ಯಪಾನ ನಿಷೇಧಿಸಲಾಗಿದೆ ಎಂಬ ಸೂಚನಾ ಫಲಕವಿದ್ದರೂ, ಕಾರ್ಮಿಕರು ಶಾಲಾ ಆವರಣದಲ್ಲೇ ಬೀಡಿ, ಸಿಗರೇಟ್ ಹಾಗೂ ಮದ್ಯಪಾನ ಮಾಡುತ್ತಿರುವುದು, ಶಾಲಾ ಕೊಠಡಿಗಳಲ್ಲೇ ತಂಗುತ್ತಿರುವುದು ಕಂಡುಬಂದಿದೆ. ಇದರಿಂದ ಶಾಲೆಯ ಸ್ವಚ್ಛತೆ, ಶಿಸ್ತು ಮತ್ತು ಮಕ್ಕಳ ಸುರಕ್ಷತೆ ಕುರಿತಾಗಿ ಆತಂಕ ಮೂಡಿದೆ. ಶಾಲಾ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಶಿಕ್ಷಕರ ನಿರ್ಲಕ್ಷ್ಯವೂ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ವಕೀಲ ಜಯಣ್ಣ ಹೇಳಿಕೆ

ವಕೀಲ ಜಯಣ್ಣ ಅವರು ಜ. 20 ರಂದು ಸಂಜೆ ಸುಮಾರು 5.40ರ ವೇಳೆಗೆ ಕೋರ್ಟ್ ಕಾರ್ಯ ಮುಗಿಸಿ ಚಂದನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದಾಗ, ಕಾರ್ಮಿಕರು ಶಾಲಾ ಆವರಣದತ್ತ ತೆರಳುತ್ತಿರುವುದನ್ನು ಗಮನಿಸಿ ಪ್ರಶ್ನಿಸಿದಾಗ, ಶಾಲೆಯ ಕೊಠಡಿಗಳನ್ನು ಬಾಡಿಗೆಗೆ ನೀಡಿರುವ ವಿಚಾರ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. ಚಂದನಹಳ್ಳಿಯಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿರುವ ಮಂಜುನಾಥ್ ಎಂಬ ಗುತ್ತಿಗೆದಾರ ಕಾರ್ಮಿಕರಿಂದ ಹಣ ಪಡೆದು ತಂಗಲು ಈ ವ್ಯವಸ್ಥೆ ಮಾಡಲಾಗಿದೆ ಎಂಬುದೂ ತಿಳಿದುಬಂದಿದೆ.

ಕಠಿಣ ಕ್ರಮಕ್ಕೆ ಆಗ್ರಹ

“ಸರ್ಕಾರಿ ಪ್ರೌಢಶಾಲೆಯನ್ನು ವಸತಿಗೃಹವಾಗಿ ಬಳಸಿರುವುದು ಸಂಪೂರ್ಣ ತಪ್ಪು. ಇದರಿಂದ ಮಕ್ಕಳ ಹಾಜರಾತಿ ಕುಸಿಯುವ ಸಾಧ್ಯತೆ ಇದೆ. ಅಪರಿಚಿತ ವ್ಯಕ್ತಿಗಳ ಓಡಾಟದಿಂದ ಪೊಕ್ಸೋ ಕಾಯ್ದೆಗೆ ಸಂಬಂಧಿಸಿದ ಅಪಾಯಗಳೂ ಉಂಟಾಗಬಹುದು.

ಶಾಲೆಯ ಗೌರವ ಹಾಗೂ ಮಕ್ಕಳ ಭವಿಷ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಸಂಬಂಧಿಸಿದ ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಮುಖ್ಯೋಪಾಧ್ಯಾಯ ಕರಿಬಸಪ್ಪ ಅವರನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಕಚೇರಿಗಳ ಮುಂದೆ ಉಗ್ರ ಹೋರಾಟ ನಡೆಸಲಾಗುವುದು,” ಎಂದು ವಕೀಲ ಜಯಣ್ಣ ಎಚ್ಚರಿಕೆ ನೀಡಿದ್ದಾರೆ.