ಹಾಸನ: ಜ. 14 ರಂದು ಭೀಮ ಕೋರೆಂಗಾವ್ ವಿಜಯೋತ್ಸವ ಅಂಗವಾಗಿ ನಗರದಲ್ಲಿ ಬೈಕ್ ರ್ಯಾಲಿ : ಹೆಚ್.ಕೆ.‌ಸಂದೇಶ್

ಹಾಸನ: ಭೀಮ ಕೋರೆಂಗಾವ್ ವಿಜಯೋತ್ಸವ ಅಂಗವಾಗಿ ಜ. 14 ರಂದು ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಹೆಚ್.ಕೆ.ಸಂದೇಶ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಭಾರಿಗೆ ಜಿಲ್ಲಾ ಕೇಂದ್ರದಲ್ಲಿ ಜ.20 ರಂದು ಭೀಮ ಕೋರೆಗಾವ್ ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು, ಅಂಗವಾಗಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಜ. 14 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಭೀಮ ಕೋರೆಗಾಂವ್ ವಿಜಯೋತ್ಸವಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಭೀಮ್ ರಾವ್ ಅಂಬೇಡ್ಕ‌ರ್ ಅವರು ಆಗಮಿಸುತ್ತಿದ್ದು, ಈ ಹಿನ್ನೆಲೆ ಸಮುದಾಯದ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಲಿ ಎಂಬ ಕಾರಣಕ್ಕಾಗಿ ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿದ್ದು ನಗರದ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಆರಂಭವಾಗುವ ರ್ಯಾಲಿಯೂ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ಅಂಬೇಡ್ಕರ್ ಪ್ರತಿಮೆ ಬಳಿಯೇ ರ್ಯಾಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಬೈಕ್ ರ್ಯಾಲಿಯಲ್ಲಿ ಸಮುದಾಯ ಮುಖಂಡರು, ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿ ಯಶಸ್ವಿಗೊಳಿಸಬೇಕು ಎಂದ ಅವರು, ಬೈಕ್ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಿ ಬೆಳಗ್ಗೆ ಆಗಮಿಸಬೇಕಾಗಿ ಮನವಿ ಮಾಡಿದರು.

ಮುಖಂಡರಾದ ಮಣಿಕಂಠ, ಗುದ್ದೇನಹಳ್ಳಿ ರಂಗಸ್ವಾಮಿ, ಚೌಡಹಳ್ಳಿ ಜಗದೀಶ್, ಗೋವಿಂದರಾಜು, ಹರೀಶ್ ಉಡುವಾರೆ ಮತ್ತಿತರರು ಹಾಜರಿದ್ದರು.