ಹಾಸನ: RTO ಕಚೇರಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮ- ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಿ: ಮೋಟಾರು ವಾಹನ ನಿರೀಕ್ಷಕಿ ಆಶಾ ಸಲಹೆ

ಹಾಸನ : ಹಾಸನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಇಂದು ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಇಲಾಖೆಯ ಇನ್ಸ್‌ಪೆಕ್ಟರ್ ಆಶಾ ಮಾತನಾಡಿ, ವಾಯು ಮಾಲಿನ್ಯವು ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಉಂಟುಮಾಡುತ್ತಿರುವ ದುಷ್ಪರಿಣಾಮಗಳನ್ನು ವಿವರಿಸಿದರು.
“ವಾಯು ಮಾಲಿನ್ಯದಿಂದ ಓಝೋನ್ ಪದರ ಕುಗ್ಗುತ್ತಿದ್ದು, ನೇರಳಾತೀತ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತಿರುವುದರಿಂದ ಮಾನವ ಆರೋಗ್ಯಕ್ಕೆ ಅಪಾಯ ಉಂಟಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು,” ಎಂದರು.

ವಾಹನಗಳಿಂದ ಹೊರಬರುವ ಹೊಗೆ ಮಾಲಿನ್ಯ ತಡೆಗಟ್ಟಲು ನಿಗದಿತ ಅವಧಿಯಲ್ಲಿ ಹೊಗೆ ತಪಾಸಣೆ ಮಾಡಿಸಿಕೊಳ್ಳುವುದು, ಎಂಜಿನ್ ಫಿಲ್ಟರ್ ಮತ್ತು ಆಯಿಲ್ ಬದಲಾವಣೆ ಮಾಡಿಸುವುದು ಅತ್ಯವಶ್ಯಕವೆಂದು ಅವರು ತಿಳಿಸಿದರು.
ಮರ-ಗಿಡಗಳನ್ನು ಬೆಳೆಸುವುದು, ಅಗತ್ಯವಿಲ್ಲದಿದ್ದರೆ ಪ್ರತ್ಯೇಕ ವಾಹನ ಬಳಸುವುದನ್ನು ತಪ್ಪಿಸಿ, ಒಟ್ಟಾಗಿ ವಾಹನ ಉಪಯೋಗಿಸುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಾಹನ ಮಾಲಿನ್ಯದಿಂದ ಉಸಿರಾಟದ ತೊಂದರೆ, ಹೃದಯಾಘಾತ, ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಆಶಾ ಇನ್ಸ್‌ಪೆಕ್ಟರ್ ಎಚ್ಚರಿಸಿದರು.