Hassan Breakning News: ಸಿಡಿಲು ಬಡಿದು 70 ವರ್ಷದ ವೃದ್ಧೆ ದಾರುಣ ಅಂತ್ಯ; ಮರದಡಿ ನಿಂತಿದ್ದಾಗ ಸಂಭವಿಸಿದ ದುರಂತ

ಮುಖ್ಯಾಂಶಗಳು:

  • ​ಆಲೂರು ತಾಲ್ಲೂಕಿನ ಹುಲಕುಂದ ಎಸ್ಟೇಟ್ ಬಳಿ ಘಟನೆ.
  • ​ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದ ವೇಳೆ ಬಂದೆರಗಿದ ಸಿಡಿಲು.
  • ​ಸಿಡಿಲಿನ ರಭಸಕ್ಕೆ ಸೀಳಿ ಎರಡು ಭಾಗವಾದ ಬೃಹತ್ ಮರ.

​Hassan|ಹಾಸನ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಶುರುವಾಗಿದ್ದು, ಇದರ ಬೆನ್ನಲ್ಲೇ ಆಲೂರು ತಾಲ್ಲೂಕಿನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮೃತ ವೃದ್ಧೆಯನ್ನು ಮಾದೀಹಳ್ಳಿ ಗ್ರಾಮದ ನಿವಾಸಿ ನೀಲಮ್ಮ (70) ಎಂದು ಗುರುತಿಸಲಾಗಿದೆ.

​ಆಲೂರು ತಾಲ್ಲೂಕಿನ ಹುಲಕುಂದ ಎಸ್ಟೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಏಕಾಏಕಿ ಮಳೆ ಆರಂಭವಾಗುತ್ತಿದ್ದಂತೆ ನೀಲಮ್ಮ ಅವರು ಮಳೆಯಿಂದ ರಕ್ಷಣೆ ಪಡೆಯಲು ಸ್ಥಳದಲ್ಲಿದ್ದ ಮರಯೊಂದರ ಕೆಳಗೆ ಹೋಗಿ ನಿಂತಿದ್ದರು. ಈ ವೇಳೆ ಭಾರಿ ಶಬ್ದದೊಂದಿಗೆ ಬಂದೆರಗಿದ ಸಿಡಿಲು ನೇರವಾಗಿ ಮರಕ್ಕೆ ಅಪ್ಪಳಿಸಿದ್ದು, ಪರಿಣಾಮ ನೀಲಮ್ಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

​ಸಿಡಿಲು ಅಪ್ಪಳಿಸಿದ ರಭಸ ಎಷ್ಟಿತ್ತೆಂದರೆ, ನೀಲಮ್ಮ ಆಶ್ರಯ ಪಡೆದಿದ್ದ ಮರವು ಸಂಪೂರ್ಣವಾಗಿ ಸೀಳಿ ಎರಡು ಭಾಗವಾಗಿದೆ. ಇದು ಸಿಡಿಲಿನ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತಿದೆ.

​ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್‌ಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಆಲೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

​ಘಟನೆ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಮಳೆಯ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲದಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಹಾಗೂ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.