ಹಾಸನ: ಹಾಸನ ಮಲೆನಾಡು ಶಿಕ್ಷಣ ಸಂಸ್ಥೆ: ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಅವಿಶ್ವಾಸ ನಿರ್ಣಯ – ಅಶೋಕ್ ಹಾರನಹಳ್ಳಿ ತಂಡಕ್ಕೆ 14 ಮತಗಳ ಬೆಂಬಲ

ಹಾಸನ: ನಗರದ ಪ್ರತಿಷ್ಠಿತ ಮಲೆನಾಡು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಉಂಟಾಗಿದ್ದ ಅಂತರ್ಯುದ್ಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನದಂತೆ ಗುರುವಾರ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡನೆ ನಡೆಯಿತು.

ಕಟ್ಟುನಿಟ್ಟಿನ ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ನೇತೃತ್ವದ ತಂಡಕ್ಕೆ 14 ಮತಗಳು ಲಭಿಸಿದರೆ, ಹಾಲಿ ಅಧ್ಯಕ್ಷ ಆರ್.ಟಿ. ದೇವೇಗೌಡ ಅವರ ತಂಡಕ್ಕೆ 10 ಮತಗಳು ದೊರಕಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲಾ ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಬಿ.ಆರ್. ಗುರುದೇವ್ ಅವರ ತಂಡ ಹೈಕೋರ್ಟ್ ಮೊರೆ ಹೋಗಿತ್ತು. ಸೋಮವಾರ ನಡೆದ ವಿಚಾರಣೆಯಲ್ಲಿ ಹೈಕೋರ್ಟ್, ಆಡಳಿತ ಮಂಡಳಿಯಲ್ಲಿ 2/3 ಸಂಖ್ಯಾಬಲದ ಮಾನದಂಡದಂತೆ ಫೆಬ್ರವರಿ 12ರಂದು ಮರುಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಿತ್ತು. ಅಲ್ಲದೆ, ಪ್ರಕ್ರಿಯೆಯ ಪಾರದರ್ಶಕತೆ ಖಚಿತಪಡಿಸಲು ಹೈಕೋರ್ಟ್ ವೀಕ್ಷಕರನ್ನು ನೇಮಿಸಿ, ಸಂಪೂರ್ಣ ಸಭೆಯ ವರದಿಯನ್ನು ಫೆಬ್ರವರಿ 16ರಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಿತ್ತು.

ನ್ಯಾಯಾಲಯದ ಆದೇಶದಂತೆ ಗುರುವಾರ ನಡೆದ ಮಹತ್ವದ ಸಭೆಗೆ ಸಂಸ್ಥೆಯ ಎಲ್ಲಾ 24 ನಿರ್ದೇಶಕರು ಹಾಜರಿದ್ದರು. ಹೈಕೋರ್ಟ್ ವೀಕ್ಷಕರ ಸಮ್ಮುಖದಲ್ಲಿ ಶಿಸ್ತಿನ ವಾತಾವರಣದಲ್ಲಿ ಮತದಾನ ನಡೆಯಿತು. ಅವಿಶ್ವಾಸ ನಿರ್ಣಯದ ವೇಳೆ ಅಶೋಕ್ ಹಾರನಹಳ್ಳಿ ಅವರ ತಂಡಕ್ಕೆ 14 ಮಂದಿ ಬೆಂಬಲ ವ್ಯಕ್ತಪಡಿಸಿದರೆ, ಆರ್.ಟಿ. ದೇವೇಗೌಡ ಅವರ ತಂಡಕ್ಕೆ 10 ಮಂದಿ ಬೆಂಬಲ ಸೂಚಿಸಿದರು.

ಈ ಫಲಿತಾಂಶದಿಂದ ಸಂಸ್ಥೆಯ ಆಡಳಿತದಲ್ಲಿ ಮಹತ್ವದ ಬದಲಾವಣೆಗಳ ಸಾಧ್ಯತೆ ಎದುರಾಗಿದೆ. ಆದರೆ 2/3 ಸಂಖ್ಯಾಬಲದ ಮಾನದಂಡ ಪೂರ್ತಿಯಾಗಿದೆಯೇ ಎಂಬ ಪ್ರಶ್ನೆಯೂ ಈಗ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಅಂತಿಮ ನಿರ್ಧಾರ ಹೈಕೋರ್ಟ್ ಮುಂದಿನ ವಿಚಾರಣೆಯಲ್ಲೇ ಸ್ಪಷ್ಟವಾಗುವ ಸಾಧ್ಯತೆ ಇದೆ.

ಮಲೆನಾಡು ಶಿಕ್ಷಣ ಸಂಸ್ಥೆಯ ಆಡಳಿತ ಭವಿಷ್ಯ ಇದೀಗ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿತವಾಗಿದ್ದು, ಫೆಬ್ರವರಿ 16ರಂದು ನಡೆಯಲಿರುವ ವಿಚಾರಣೆ ಕುರಿತು ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿದೆ.