ಹಾಸನ: 1,000 ರೂಪಾಯಿಗೆ 10 ಪ್ಯಾಂಟ್ಗಳು ಅಥವಾ 10 ಶರ್ಟ್ಗಳ ಭರ್ಜರಿ ಆಫರ್ ಘೋಷಿಸಿದ ಹೊಸದಾಗಿ ತೆರೆದ ಬಟ್ಟೆ ಅಂಗಡಿಯ ಮುಂದೆ ಭಾರೀ ಜನಸಂದಣಿ ಸೇರಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಯಿತು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಅಂಗಡಿ ಮುಚ್ಚಿಸಿದ ಘಟನೆ ಭಾನುವಾರ ಮಧ್ಯಾಹ್ನ ನಗರದ ಕೇಂದ್ರ ಭಾಗದಲ್ಲಿ ನಡೆದಿದೆ.
ಈ ಘಟನೆ ಸಹ್ಯಾದ್ರಿ ಥಿಯೇಟರ್ ಹಿಂಬದಿಯ ಅರಳೇಪೇಟೆ ರಸ್ತೆಯಲ್ಲಿರುವ ಫ್ರೆಂಡ್ಸ್ ಹೋಲ್ಸೇಲ್ ಗಾರ್ಮೆಂಟ್ಸ್ ಅಂಗಡಿಯಲ್ಲಿ ನಡೆದಿದೆ. ಉದ್ಘಾಟನೆಯ ಆಕರ್ಷಣೆಯಾಗಿ 1,000 ರೂಪಾಯಿಗೆ 10 ಪ್ಯಾಂಟ್ಗಳು ಅಥವಾ 10 ಶರ್ಟ್ಗಳ ಆಫರ್ ಘೋಷಿಸಿದ್ದರಿಂದ ಬೆಳಗ್ಗೆಯಿಂದಲೇ ಜನರು ಭಾರೀ ಸಂಖ್ಯೆಯಲ್ಲಿ ಗುಂಪುಗೂಡಿದರು. ವ್ಯಾಪಾರ ಆರಂಭವಾಗುತ್ತಿದ್ದಂತೆ ಜನರ ನೂಕುನುಗ್ಗಲಿನಿಂದ ಗೊಂದಲ ಉಂಟಾಯಿತು. ಅರಳೇಪೇಟೆ ರಸ್ತೆಯ ಮಧ್ಯದಲ್ಲಿ ಜನ ಜಮಾಯಿಸಿದ ಕಾರಣ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ವಿಫಲರಾದಾಗ, ಲಘು ಲಾಠಿ ಚಾರ್ಜ್ ಮಾಡಿದರು. ಇದರಿಂದ ಜನರು ಚೆದುರಿಹೋಗಿ ಓಡಿಹೋದರು. ಮುನ್ನೆಚ್ಚರಿಕೆಯಾಗಿ ಸುತ್ತಮುತ್ತಲಿನ ಅಂಗಡಿಗಳನ್ನು ಮುಚ್ಚಿಸಲಾಯಿತು. ಫ್ರೆಂಡ್ಸ್ ಹೋಲ್ಸೇಲ್ ಗಾರ್ಮೆಂಟ್ಸ್ ಅಂಗಡಿಯನ್ನು ಕೂಡ ಬಾಗಿಲು ಹಾಕಿಸಿ, ಪೊಲೀಸರು ಬೀಗ ಜಡಿದು ತಾತ್ಕಾಲಿಕವಾಗಿ ವ್ಯಾಪಾರವನ್ನು ಸ್ಥಗಿತಗೊಳಿಸಿದರು. ಅಂಗಡಿಯ ಬಾಗಿಲಿಗೆ “ಆಫರ್ ಮುಗಿದಿದೆ” ಎಂದು ಫಲಕವನ್ನು ಹಾಕಲಾಯಿತು.
ಅಂಗಡಿಯನ್ನು ಮುಚ್ಚಿದರೂ, ಜನರು ಆಫರ್ನ ಬಟ್ಟೆಗಳನ್ನು ಕೊಂಡುಕೊಳ್ಳಲು ಅಂಗಡಿಯ ಮುಂದೆಯೇ ಕಾಯುತ್ತಿದ್ದರು. ಜಾತ್ರೆಯಂತೆ ಜನರು ಬಟ್ಟೆ ಕೊಂಡುಕೊಳ್ಳಲು ಕಾದಿರುವ ದೃಶ್ಯ ಕಂಡುಬಂತು. ಈ ವೇಳೆ ಪೊಲೀಸರು ಅಂಗಡಿಯ ಮಾಲೀಕರನ್ನು ಕರೆದೊಯ್ದು ವಿಚಾರಣೆ ನಡೆಸಿದರು.










