ಹಾಸನ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ವಲಯ ಸಂಶೋಧನಾ ಕೇಂದ್ರ, ವಿ.ಸಿ. ಫಾರಂ ಮಂಡ್ಯ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ (ಮುಸುಕಿನ ಜೋಳ) ಹಾಗೂ ಹಾಸನ ಜಿಲ್ಲಾ ಕೃಷಿ ಇಲಾಖೆ ಸಹಯೋಗದಲ್ಲಿ ಆತ್ಮ ಯೋಜನೆಯಡಿ ಮುಸುಕಿನ ಜೋಳದಲ್ಲಿ ಕೇದಿಗೆ ರೋಗಕ್ಕೆ ಸಹಿಷ್ಣುತೆಯುಳ್ಳ ಹೈಬ್ರೀಡ್ ಎಂಎಹೆಚ್–14–138 ಕುರಿತ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಾಸನ ತಾಲ್ಲೂಕಿನ ದುದ್ದ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಡಾ. ರಮೇಶ್‌ಕುಮಾರ್ ಪಿ. ಉದ್ಘಾಟಿಸಿ ರೈತರು ಬೆಳೆದಿರುವ ಮೆಕ್ಕೆಜೋಳ ಬೆಳೆಗಳನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಮಣ್ಣಿನಲ್ಲಿಯೇ ವಿವಿಧ ರೋಗಾಣುಗಳು ಇರುವುದರಿಂದ ರೈತರು ಪದೇ ಪದೇ ಒಂದೇ ಬೆಳೆ ಬೆಳೆದರೆ ರೋಗಗಳ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಬೆಳೆ ಪರಿವರ್ತನೆ ಅತ್ಯವಶ್ಯಕ ಎಂದು ತಿಳಿಸಿದರು.
ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಹೊಸ ಹೊಸ ತಳಿಗಳ ಸಂಶೋಧನೆ ನಡೆಯುತ್ತಿದ್ದು, ಸಂಶೋಧನೆ ಪೂರ್ಣಗೊಂಡ ಬಳಿಕವೇ ಅವುಗಳನ್ನು ರೈತರಿಗೆ ವಿತರಿಸಲಾಗುವುದು. ಖಾಸಗಿ ಕಂಪನಿಗಳಿಂದ ಪರಿಚಯಗೊಳ್ಳುವ ಹೊಸ ತಳಿಗಳನ್ನು ರೈತರಿಗೆ ಮಾರಾಟ ಮಾಡುವ ಮೊದಲು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಗುಣಮಟ್ಟ ಹಾಗೂ ರೋಗರಹಿತವೆಂದು ದೃಢಪಟ್ಟ ಬಳಿಕವೇ ಹಾಸನ ಜಿಲ್ಲೆಯ ರೈತರಿಗೆ ಮಾರಾಟಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿದರು.
ಹಾಸನ ಜಿಲ್ಲೆ ರಾಜ್ಯದಲ್ಲೇ ಹೈನುಗಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ರೈತರು ಹೈನುಗಾರಿಕೆಯ ಜೊತೆಗೆ ಹೊಸ ಬೆಳೆಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಸಿ. ರಾಮಚಂದ್ರ, ಹಾಸನ ಕೃಷಿ ಕಾಲೇಜಿನ ಪ್ರಭಾರ ಡೀನ್ ಕೃಷ್ಣಪ್ರಸಾದ್ ಬಿ.ಟಿ., ಕೃಷಿ ಸಂಶೋಧನಾ ಕೇಂದ್ರದ ಡಾ. ಬಸವರಾಜು ಬಿ.ಎಸ್., ಹಾಸನ ಕೃಷಿ ಇಲಾಖೆ ಉಪನಿರ್ದೇಶಕ ಎ.ಎಸ್. ಕೋಕಿಲ, ಕೃಷಿ ಅಧಿಕಾರಿ ಮೋಹನ್‌ಕುಮಾರ್, ದುದ್ದ ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಮೋಹನ್‌ಕುಮಾರ್ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.










