ಹಾಸನ: ನಗರದ ಎಂ.ಜಿ.ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ಪುಸ್ತಕ ಪ್ರದರ್ಶನ ಮೇಳ ನಡೆಯಿತು.
ಈ ಪ್ರದರ್ಶನವು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಜೊತೆಗೆ ವಿವಿಧ ವಿಷಯಗಳ ಜ್ಞಾನ ವಿಸ್ತರಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕ ಓದುವುದು ವಿದ್ಯಾರ್ಥಿಗಳ ಜ್ಞಾನದ ವಿಸ್ತರಣೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಗ್ರಂಥಾಲಯದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮನೋಹರ್.ಎನ್ ಮಾತನಾಡಿ, ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಮ್ಮ ಓದು-ಬರಹದ ವಿಸ್ತಾರವನ್ನು ವೃದ್ಧಿಸಿಕೊಳ್ಳಬೇಕು. ನಾವು ಒಂದು ನಿರ್ದಿಷ್ಟ ವಿಷಯವನ್ನು ಮಾತ್ರ ಹಿಡಿದುಕೊಂಡು ಓದಿದರೆ ಸಾಲದು, ಅದರ ಜೊತೆಗೆ ಬೇರೆ ಬೇರೆ ಕ್ಷೇತ್ರದ ವಿಚಾರಗಳ ಕುರಿತು ಪುಸ್ತಕಗಳನ್ನು ಓದಬೇಕೆಂದರು. ಪುಸ್ತಕಗಳನ್ನು ಓದುವುದರಿಂದ ಒಂದು ವಿಷಯದ ಬಗ್ಗೆ ಹಲವಾರು ರೀತಿಯ ಅಭಿಪ್ರಾಯ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಪಾಲಕರಾದ ಡಾ.ಮಂಜುನಾಥ್.ಎಸ್ ವಿದ್ಯಾರ್ಥಿಗಳಿಗೆ ಲಭ್ಯವಿರುವ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಕ್ಷೇತ್ರಗಳ ಪುಸ್ತಕಗಳು ಪ್ರದರ್ಶನಕ್ಕೆ ಇರಿಸಲಾಗಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಸ್ಪರ್ಧೆಗೆ ಭಾಗವಹಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರವಿಕುಮಾರ್.ಪಿ, ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.










