ಚನ್ನರಾಯಪಟ್ಟಣ: ಬರಡು ಭೂಮಿಯನ್ನು ಹಸಿರು ತೋಟವನ್ನಾಗಿ ಮಾಡಿದ ಹೂವಿನಹಳ್ಳಿ ರೈತ ಮಂಜುನಾಥ್

H.B. Manjunath of Huvinahalli village in the taluk has become a model farmer by turning a barren land with rocks and thorns into a beautiful land, following organic and integrated farming and growing crops like gold.

ಚನ್ನರಾಯಪಟ್ಟಣ: ಕಲ್ಲಿನ ಬಂಡೆ ಹಾಗೂ ಮುಳ್ಳಿನ ಗಿಡಗಳೊಂದಿಗೆ ಬರಡು ಭೂಮಿಯಾಗಿದ್ದ ಜಮೀನನ್ನು ಹಸನಗೂಳಿಸಿ ಸಾವಯವ ಹಾಗೂ ಸಮಗ್ರ ಕೃಷಿ ಅನುಸರಿಸಿ ಬಂಗಾರದಂತಹ ಬೆಳೆಗಳನ್ನು ಬೆಳೆಯುವ ಮೂಲಕ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಹೆಚ್.ಬಿ.ಮಂಜುನಾಥ್ ಮಾದರಿ ರೈತ ಎನಿಸಿಕೊಂಡಿದ್ದಾರೆ.

ತಮಗಿರುವ 2.25 ಎಕರೆ ಕೃಷಿ ಜಮೀನಿನಲ್ಲಿ 140 ತೆಂಗಿನ ಮರಗಳು, 600 ಅಡಿಕೆ ಮರ, 110 ಹಿಮಾಸಾಗರ ಮಾವು, ಏಲಕ್ಕಿ, ಮೆಣಸು, ಸಪೋಟ, ವಾಟರ್ ಆಪಲ್, ಸೀಬೆ, ನಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.

ಇದಕ್ಕೂ ಮೊದಲು ಜಮೀನಿನ ಅಲ್ಲಲ್ಲಿ ಕಲ್ಲು ಬಂಡೆಗಳು ಇದ್ದು ಕಾರೆಗುಚ್ಚಿ ಸೇರಿದಂತೆ ವಿವಿಧ ಗಿಡಗಂಟೆಗಳು ಬೆಳೆದು ಬೋರೆ ಪ್ರದೇಶದಂತೆ ಕಾಣುತಿತ್ತು. ಮಂಜುನಾಥ್ ಅವರು ಜೆಸಿಬಿ ಹಾಗೂ ಇತರೆ ಯಂತ್ರಗಳ ಸಹಾಯದಿಂದ ಎಲ್ಲವನ್ನೂ ತೆರುವು ಉಳಿಸಿ ಹಸಿರು ಕ್ರಾಂತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಜಮೀನಿನಲ್ಲಿ ಅಳವಡಿಸಿರುವ ಎಲ್ಲಾ ಬೆಳೆಗಳಿಗೂ ಹನಿ ನೀರಾವರಿ ಪದ್ಧತಿಯೊಂದಿಗೆ ನೀರು ಉಳಿಸುವ ವ್ಯವಸ್ಥೆ ಮಾಡಲಾಗಿದೆ. ಕಳೆದ 8 ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಔಷಧಿ ಬಳಸದೆ ಸಾವಯವ ಕೃಷಿ ಅನುಸರಿಸಿದ್ದಾರೆ.

ಜಮೀನಿನಲ್ಲಿ ಒಂದಷ್ಟು ಭಾಗವನ್ನು ಕೈದೂಟ ಮಾಡಿಕೊಂಡು ಮನೆಗೆ ಬೇಕಾಗುವ ಹಾಗೂ ಸಾಕಾಗುವಷ್ಟು ಸೊಪ್ಪು ಹಾಗೂ ತರಕಾರಿಗಳನ್ನು ಬೆಳೆದು ಉಪಯೋಗಿಸುತ್ತಾರೆ.

ಎರಡು ಮಲೆನಾಡು ಗಿಡ್ಡ ಹಸುಗಳು, ಅಮ್ಮಿಘಡ ಹಾಗೂ ಡಾರ್ಫರ್ ಕುರಿಗಳನ್ನು ಸಾಕಿದ್ದು ತಮ್ಮ ಜಮೀನಿಗೆ ಸಾಕಾಗುವಷ್ಟು ಕೊಟ್ಟಿಗೆ ಗೊಬ್ಬರವನ್ನು ಪಡೆಯುತ್ತಿದ್ದಾರೆ. ಅನಿವಾರ್ಯ ಇದ್ದಲ್ಲಿ ವರ್ಷದಲ್ಲಿ ಒಂದೆರಡು ಬಾರಿ ಬೇರೆ ರೈತರಿಂದ ತಿಪ್ಪೆ ಗೊಬ್ಬರ ಖರೀದಿಸಿ ಬೆಳೆಗಳಿಗೆ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಯಾವುದೇ ಬೆಳೆಗಳಿಂದ ಹೆಚ್ಚು ಲಾಭ ಸಿಗುತ್ತಿರಲಿಲ್ಲ. ಆದರೆ ಸಾವಯುವ ಕೃಷಿ ಅನುಸರಿಸಿದ ನಂತರ ಎಲ್ಲಾ ಬೆಳೆಗಳಲ್ಲಿಯೂ ಹೆಚ್ಚಿನ ಇಳುವರಿಯೊಂದಿಗೆ ಸಾಕಷ್ಟು ಲಾಭ ಸಿಗುತ್ತದೆ‌ ಎಂದು ರೈತ ಮಂಜುನಾಥ್ ತಿಳಿಸಿದರು.

ಕುರಿ ಸಾಕಾಣಿಕೆಗೆ ಆದ್ಯತೆ: ಅಮ್ಮಿಘಡ ಹಾಗೂ ಡಾರ್ಫರ್ ಸೇರಿದಂತೆ ವಿವಿಧ ತಳಿಯ ಕುರಿಗಳನ್ನು ಹಾಕಿದ್ದು, ಹೊಸ ಹೊಸ ತಳಿಯ ಕುರಿಗಳನ್ನು ತಂದು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದಾರೆ.

H.B. Manjunath of Huvinahalli village in the taluk has become a model farmer by turning a barren land with rocks and thorns into a beautiful land, following organic and integrated farming and growing crops like gold.