ಗಣೇಶ ವಿಸರ್ಜನೆ ವೇಳೆ ಅವಘಡ: ವಿದ್ಯುತ್ ತಗುಲಿ ಬಾಲಕ ಸಾವು

ಬಾಲಕ ಸೇರಿ ಇಬ್ಬರಿಗೆ ಶಾಕ್: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್‌ ತಂತಿ ಮೇಲೆತ್ತಲು ಮರೆತರು

ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಎ.ಮಂಜು, ಗಾಯಾಳುಗಳ ಆರೋಗ್ಯ ವಿಚಾರಿಸಿದರು

ಅರಕಲಗೂಡು: ಗಣಪತಿ ವಿಸರ್ಜನೆ ಮಾಡಿ ವಾಪಾಸ್ ಬರುವಾಗ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಓರ್ವ ಬಾಲಕ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಕತ್ತಿ ಮಲ್ಲೇಹಳ್ಳಿಯಲ್ಲಿ ನಡೆದಿದೆ. ಬೆಳವಾಡಿ ಗ್ರಾಮದ ಯಶ್ವಂತ್ (೧೪) ಮೃತ ಬಾಲಕ. ಕತ್ತಿಮಲ್ಲೇನಹಳ್ಳಿ ಗ್ರಾಮದ ಪ್ರಮೋದ್ (೨೭) ಮತ್ತು ಮೋಹನ್ (೧೨)ಎಂಬುವರ ಸ್ಥಿತಿ ಗಂಭೀರವಾಗಿದೆ. ಮೃತ ಯಶ್ವಂತ್ ಮೂಲತಃ ಬೆಳವಾಡಿ ಗ್ರಾಮದವನಾಗಿದ್ದು, ಕತ್ತಿಮಲ್ಲೇನ ಹಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ.ಕತ್ತಿಮಲ್ಲೇನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಸೋಮವಾರ ಮಧ್ಯಾಹ್ನ ೨.೩೦ರ ವೇಳೆಯಲ್ಲಿ ವಿಸರ್ಜನೆ ಮಾಡಲು ಅಲಂಕೃತಗೊಂಡಿದ್ದ ಟ್ರ್ಯಾಕ್ಟರ್‌ನಲ್ಲಿ ಕರೆದು ಕೊಂಡು ಹೋಗಿದ್ದರು.

ಸಮೀಪದ ಕೆರೆಯಲ್ಲಿ ವಿಸರ್ಜನೆ ಮಾಡಿ, ವಾಪಾಸ್ ಬರುವ ವೇಳೆ ವಿದ್ಯುತ್  ತಂತಿ ತಗುಲಿ ಈ ಅವಘಡ ಸಂಭವಿಸಿದೆ.ಟ್ರ್ಯಾಕ್ಟರ್‌ನಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ. ಕೆರೆಯ ಬಳಿ ತಳಮಟ್ಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ, ಅಲಂಕೃತ ಟ್ರ್ಯಾಕ್ಟರ್‌ಗೆ ಕಟ್ಟಿದ್ದ ಕಬ್ಬಿಣದ ಕಮಾನಿಗೆ ತಗುಲಿದೆ.
ವಿದ್ಯುತ್ ಪ್ರವಹಿಸುತ್ತಲೇ ಟ್ರ್ಯಾಕ್ಟರ್ ಮೇಲಿದ್ದ ಹಲವರು ಇಳಿದು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದರೆ, ಯಶ್ವಂತ್ ಟ್ರ್ಯಾಕ್ಟರ್ ಮೇಲೆ ಮೃತಪಟ್ಟಿದ್ದಾನೆ.
ಪ್ರಮೋದ್, ಮೋಹನ್ ವಿದ್ಯುತ್ ಶಾಕ್‌ನಿಂದ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಇವರಿಬ್ಬರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಅರಕಲಗೂಡು ಸಿಪಿಐ ರಘುಪತಿ, ಪಿಎಸ್‌ಐ ಕಾಳೇಗೌಡ, ಸೆಸ್ಕಾಂ ಅಧಿಕಾರಿ ಚಿದಂಬರ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಶಾಸಕ ಎ.ಮಂಜು ಭೇಟಿ ನೀಡಿ ಮೃತ ಬಾಲಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಮಂಜು, ಬಹುತೇಕ ಗ್ರಾಮಗಳಲ್ಲಿ ಗಣೇಶಮೂರ್ತಿ ಇಡುವುದು ವಾಡಿಕೆಯಾಗಿದೆ. ಪಟ್ಟಣ ಪ್ರದೇಶದಲ್ಲಿಯೂ ಕೂಡ ಯುವಕರು ಇಡುತ್ತಾರೆ. ಗಣೇಶ ವಿಸರ್ಜನೆ ಮಾಡುವ ವೇಳೆ ಕೆಇಬಿ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು ಒಳಿತು. ಮೈಮರೆತು ಹಿಂದಿರುಗುವ ವೇಳೆ ಪುಟ್ಟ ಬಾಲಕ ವಿದ್ಯುತ್ ಶಾರ್ಕ್ ಸರ್ಕ್ಯೂಟ್‌ನಿಂದ ಪ್ರಾಣ ಬಿಟ್ಟಿದ್ದಾನೆ. ಮುಂದೆಯಾದರೂ ಇಲಾಖೆ ಅಧಿಕಾರಿ, ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕಿದೆ ಎಂದು ಹೇಳಿದರು.
ವಿಸರ್ಜನೆಗೆ ಹೋಗುವಾಗ ವಿದ್ಯುತ್ ಲೈನ್ ಅಲಂಕೃತ ಮಂಟಪಕ್ಕೆ ತಾಗುತ್ತಿದ್ದವೇಳೆ ಕೋಲಿನಿಂದ ಮೇಲಕ್ಕೆ ಎತ್ತಿ ಮುಂದಕ್ಕೆ ಸಾಗಿದ್ದರು. ಆದರೆ ವಿಸರ್ಜನೆ ಮಾಡಿ ಹಿದಿರುಗುವ ವೇಳೆ ಕಬ್ಬಿಣದಿಂದ ಮಾಡಿದ್ದ ಅಲಂಕೃತ ಕಮಾನಿನ ಗೋಪುರ ವಿದ್ಯುತ್ ತಂತಿಗೆ ತಾಗಿ ನಡೆಯಬಾರದ ದುರಂತ ನಡೆದು ಹೋಗಿದೆ. ಕೆಲವರು ಎಚ್ಚೆತ್ತು ಹೊರ ಜಿಗಿದಿದ್ದರೆ, ಸಕಾಲದಲ್ಲಿ ಇಳಿಯಲಾಗದ ಯಶ್ವಂತ್ ಕರೆಂಟ್ ಶಾಕ್‌ನಿಂದ ಜೀವ ಕಳೆದುಕೊಂಡಿದ್ದಾನೆ.