ಹಾಸನ : ವ್ಯಾವಹಾರಿಕ ಶಿಸ್ತು ಸಹಕಾರ ಸಂಘಗಳ ಕಾರ್ಯದಕ್ಷತೆ ಹೆಚ್ಚಿಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸ್ವಾಮಿಗೌಡ ಅಭಿಪ್ರಾಯಪಟ್ಟರು.ನಗರ ಸಮೀಪದ ಬೂವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರ ಜೀವನಾಡಿ ಇದ್ದಂತೆ, ರೈತರಿಗೆ ಆರ್ಥಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಸಹಕಾರ ಸಂಘಗಳ ಪಾತ್ರ ಹಿರಿದು ಎಂದರು. ಬೂವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಹೊಸ್ತಿನಲ್ಲಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಿ ಎಂದು ಸಲಹೆ ನೀಡಿದರು.
ತಾಪಂ ಮಾಜಿ ಸದಸ್ಯ ದಿನೇಶ್ ಕೆ.ಎಂ ಮಾತನಾಡಿ, ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಾಮಾಜಿಕ ಕಾಳಜಿ ಇರಬೇಕು. ರೈತರು ವ್ಯವಹರಿಸುವ ಸ್ಥಳದಲ್ಲಿ ಸೌಜನ್ಯದಿಂದ ವರ್ತಿಸಿ ಎಂದು ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷ ಬಿ.ಆರ್. ಬೊಮ್ಮೇಗೌಡ ಮಾತನಾಡಿ, ನಮ್ಮ ಸಂಘವು ರೈತರ ಹಿತಕ್ಕಾಗಿ, ಅವರ ಆರ್ಥಿಕ ಸ್ಥೈರ್ಯಕ್ಕಾಗಿ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಸ್ಥಾಪನೆಯಾಗಿದ್ದು, ಇಂದು ನೂರಾರು ಸದಸ್ಯರ ಶ್ರಮದಿಂದ ಮತ್ತು ವಿಶ್ವಾಸದಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದರು.
ಸುಸಜ್ಜಿತ ಕಟ್ಟಡ ಹಾಗೂ ಪೀಠೋಪಕರಣಗಳು ಸಂಘದ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿ ಎನ್ನಬಹುದು ಎಂದ ಅವರು, ಅಭಿವೃದ್ದಿ ನಿಟ್ಟಿನಲ್ಲಿ ರಾಜಕೀಯ ಬೆರೆಸದೆ ಸಂಘವನ್ನು ಪಕ್ಷಾತೀತವಾಗಿ ಮುನ್ನಡೆಸೋಣ ಎಂದರು.
ಸಂಘದ ಅಭಿವೃದ್ಧಿ ನಿಟ್ಟಿನಲ್ಲಿ ಬೆಳೆ ಸಾಲ, ಚಿನ್ನಾಭರಣ ಸಾಲ, ಸ್ವಸಹಾಯ,ಹೈನುಗಾರಿಕೆ ಸಾಲ ನೀಡಲಾಗುತ್ತಿದ್ದು, ಸಂಘದ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿಯವರು ಬಡಾವಣೆ ನಿರ್ಮಾಣ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಗೃಹ ನಿರ್ಮಾಣ ಸಾಲ ವಿಸ್ತರಿಸಲು ಚಿಂತಿಸಲಾಗಿದೆ ಎಂದರು.
ಷೇರುದಾರರ ಕ್ಷೇತ್ರದ ಸದಸ್ಯರಿಗೆ ಕಿರು ಉದ್ಯಮೆ ಸಾಲ, ಮಹಿಳಾ ಸದಸ್ಯರಿಗೆ ವಿಶೇಷ ಸಾಲ ಯೋಜನೆಗಳನ್ನು ನೀಡಿ ಸಂಘವನ್ನು ಹಾಗೂ ಸದಸ್ಯವನ್ನು ಆರ್ಥಿಕವಾಗಿ ಸದೃಢಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಮಾಜಿ ಸದಸ್ಯ ಬಿ.ಈ ಜಯರಾಂ,ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ಕರಿಯಯ್ಯ, ಚರಣ್, ರವಿಕುಮಾರ್, ಗಣೇಶ್, ಸೋಮೇಶ್, ನಾಗರಾಜು, ದುರ್ಗಾಪ್ರಸಾದ್, ಮಾಜಿ ಅಧ್ಯಕ್ಷ ಬಿ.ಜೆ ನಂಜಪ್ಪ, ಮಲ್ಲೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಟರಾಜ್, ಸಿಬ್ಬಂದಿ ಸೌಮ್ಯ ಇತರರಿದ್ದರು.










