ಮಾಡಾಳು: ಅಂಕಗಳಿಗಿಂತ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ಶಿಕ್ಷಣ ಅಗತ್ಯ-ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ

Former Minister J.C. Madhuswamy said that education is not just about earning marks for children; it is also about instilling moral values ​​and social awareness.

ಮಾಡಾಳು: ಮಕ್ಕಳಿಗೆ ಕೇವಲ ಅಂಕಗಳ ಗಳಿಕೆಯೇ ಶಿಕ್ಷಣವಲ್ಲ; ನೈತಿಕ ನೆಲೆಗಟ್ಟು ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವ ಶಿಕ್ಷಣ ಅಗತ್ಯವಾಗಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತಾಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ಎಸ್‌ಎನ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025–26ನೇ ಸಾಲಿನ ವಾರ್ಷಿಕೋತ್ಸವ ‘ಚಿಣ್ಣರ ಲೋಕ’ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕೊರತೆಯಿಂದ ಸಮಾಜಘಾತುಕ ಕೃತ್ಯಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಸಿವು ಇರಬೇಕು. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುಂದೆ ಸಾಗುವ ಛಲ ಹಾಗೂ ಮನೋಬಲ ಬೆಳೆಸಿಕೊಳ್ಳಬೇಕು. ಕ್ರಮಬದ್ಧ ಅಧ್ಯಯನ, ಶಿಸ್ತು, ಪರಿಶ್ರಮ ಮತ್ತು ವಿನಯ ಇವುಗಳನ್ನು ಆಭರಣಗಳನ್ನಾಗಿ ಮಾಡಿಕೊಂಡರೆ ಜ್ಞಾನಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂದು ಹೇಳಿದರು.

ಮಕ್ಕಳಲ್ಲಿ ಅಪಾರ ಪ್ರತಿಭೆ ಅಡಗಿದೆ. ಅದನ್ನು ಹೊರತರುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಮಕ್ಕಳು ಸುಂದರವಾದ ಶಿಲ್ಪಿಗಳಂತೆ; ದುರ್ಭ್ಯಾಸಗಳನ್ನು ಮನಸ್ಸಿನಿಂದ ಕಿತ್ತೊಗೆಯಿಸಿ, ಸದ್ಭಾವನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಉನ್ನತ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಕಣಕಟ್ಟೆ ಹೋಬಳಿ ಶಿಕ್ಷಣ ಸಂಯೋಜಕ ಬಿ.ಬಿ.ಸತೀಶ್ ಮಾತನಾಡಿ, ಮಕ್ಕಳಿಗೆ ಶಿಸ್ತನ್ನು ಬಲವಂತವಾಗಿ ಹೇರಬಾರದು. ಪ್ರೀತಿ ಮತ್ತು ವಿಶ್ವಾಸದ ಮೂಲಕ ಶಿಸ್ತಿಗೆ ತರಬೇಕು. ಜೀವನದ ಕನಸುಗಳನ್ನು ಸಾಕಾರಗೊಳಿಸಲು ಪುಸ್ತಕ ಪ್ರೇಮ ಅತ್ಯಗತ್ಯ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ನಿರಂತರ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.

ಎಸ್‌ಎಂಎಸ್ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಅಭಿನವ ಶಿವಲಿಂಗ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 622 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಸಹನ ಅವರಿಗೆ ಶಾಲಾ ಅಭಿವೃದ್ಧಿ ಸಮಿತಿ ನಿರ್ದೇಶಕ ಎಂ.ಎಸ್.ನಟರಾಜ್ ಲ್ಯಾಪ್‌ಟಾಪ್ ಅನ್ನು ಬಹುಮಾನವಾಗಿ ನೀಡಿದ್ದು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿತರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಎಸ್.ಎಂ.ನಂದೀಶ್ ವರದಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ನಿರ್ದೇಶಕರಾದ ಡಿ.ಎಸ್.ಸಿದ್ದಪ್ಪ, ಎಸ್.ಮಲ್ಲಿಕಾರ್ಜುನಪ್ಪ, ಎಂ.ಸಿ.ನಟರಾಜ್, ಎಂ.ಎನ್.ಓಂಕಾರಪ್ಪ, ಶಂಕರನಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವಣ್ಣಸ್ವಾಮಿ, ಮಾಡಾಳು ಶಿವಲಿಂಗಪ್ಪ, ಎಂಡಿ ಸೋಮಶೇಖರ್, ಮುಖ್ಯಶಿಕ್ಷಕ ಸತೀಶ್ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Former Minister J.C. Madhuswamy said that education is not just about earning marks for children; it is also about instilling moral values ​​and social awareness.